ಕಳೆದ ಸಾಲಿನ ಕಬ್ಬಿನ ಬಾಕಿ ಹಣವನ್ನು ತಕ್ಷಣ ಪಾವತಿಸಿ, ಎಸ್‌ಎಪಿ (SAP) ಕಾಯ್ದೆ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿ, ಜುಲೈ 27ರಂದು (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಆಳಗಂಚಿಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರ ರೈತರು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರ ಕಳೆದ ವರ್ಷ ಒಂದು ಟನ್ ಕಬ್ಬಿಗೆ ₹100 ಹೆಚ್ಚುವರಿ ಪಾವತಿಸಲು ಆದೇಶ ನೀಡಿದ್ದು, ಅದರಲ್ಲಿ ₹50 ಅನ್ನು ಸರ್ಕಾರವು ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ಈಗಾಗಲೇ ಪಾವತಿಸಿದೆ. ಉಳಿದ ₹50 ಅನ್ನು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಪಾವತಿಸಬೇಕಾಗಿದ್ದರೂ ಇದುವರೆಗೆ ನೀಡದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಸಂಘ ಆರೋಪಿಸಿದೆ.
ಇದಲ್ಲದೆ, ಸರ್ಕಾರದ ಆದೇಶವನ್ನು ಪಾಲಿಸುವ ಬದಲು ಕಾರ್ಖಾನೆ ಆಡಳಿತ ನ್ಯಾಯಾಲಯದ ಮೊರೆ ಹೋಗಿರುವ ಕ್ರಮ ರೈತರಿಗೆ ಅನ್ಯಾಯವಾಗಿದ್ದು, ಎಸ್‌ಎಪಿ ಕಾಯ್ದೆ ಅನ್ವಯ ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಲಾಭಾಂಶವನ್ನೂ ರೈತರಿಗೆ ಹಂಚಿಕೆ ಮಾಡಬೇಕೆಂದು ಸಂಘ ಒತ್ತಾಯಿಸಿದೆ.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಯಲಿದ್ದು, ಬಾಕಿ ಹಣವನ್ನು ಪಾವತಿಸಿ, ಸರ್ಕಾರದ ನಿಯಮಾನುಸಾರ ರೈತರಿಗೆ ಸಲ್ಲಬೇಕಾದ ಹಕ್ಕುಗಳನ್ನು ನೀಡಿ ಕಾರ್ಖಾನೆಯನ್ನು ಆರಂಭಿಸಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಲಾಗುವುದು ಎಂದು ಸಂಘ ತಿಳಿಸಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.





