ಮಹಿಳೆಯರಿಗಾಗಿ ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಬೆಂಬಲಿತ ಜಿಎಸ್‌ಎಸ್‌ಎಸ್ ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್ ಫೌಂಡೇಶನ್ (ಟಿಬಿಐಎಫ್) ವತಿಯಿಂದ ಆಯೋಜಿಸಿರುವ ‘ಐಡಿಯಾಫೋರ್ಜ್-2026’ ಆರು ವಾರಗಳ ಪೂರ್ವ ಇನ್‌ಕ್ಯುಬೇಷನ್ ಕಾರ್ಯಕ್ರಮಕ್ಕೆ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನವೋದ್ಯಮಿಗಳ ಹೊಸ ಆಲೋಚನೆಗಳನ್ನು ತಂತ್ರಜ್ಞಾನ ಆಧಾರಿತ ಹಾಗೂ ಹೂಡಿಕೆ ಆಕರ್ಷಿಸುವ ಸ್ಟಾರ್ಟ್‌ಅಪ್‌ಗಳಾಗಿ ರೂಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ತಜ್ಞರ ಮಾರ್ಗದರ್ಶನ, ಉದ್ಯಮ ಸಂಪರ್ಕ ಹಾಗೂ ಉದ್ಯಮಶೀಲತಾ ಪರಿಸರದ ನೆರವಿನೊಂದಿಗೆ ಭಾಗವಹಿಸುವವರಿಗೆ ಸಮಗ್ರ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದು ಹೊಸ ಉದ್ಯಮಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅನುಪಮಾ ಪಂಡಿತ್ ಮಾತನಾಡಿ, ಐಡಿಯಾಫೋರ್ಜ್-2026ರ ಮೊದಲ ಬ್ಯಾಚ್‌ಗೆ 49 ಸ್ಟಾರ್ಟ್‌ಅಪ್‌ಗಳು ನೋಂದಾಯಿಸಿಕೊಂಡಿವೆ ಎಂದು ತಿಳಿಸಿದರು. ಕೃಷಿ ತಂತ್ರಜ್ಞಾನ (ಅಗ್ರಿಟೆಕ್), ಆಹಾರ ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರದ ನವೋದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ವಿಶೇಷ ಎಂದರು.
ಆರು ವಾರಗಳ ತರಬೇತಿ ಅವಧಿಯಲ್ಲಿ ಸಮಸ್ಯೆ ಗುರುತಿಸುವಿಕೆ, ಪರಿಹಾರ ಅಭಿವೃದ್ಧಿ, ಕಲ್ಪನೆ ಪರಿಶೀಲನೆ, ಗ್ರಾಹಕರ ಅಧ್ಯಯನ, ಮಾರುಕಟ್ಟೆ ತಂತ್ರ, ಪ್ರೊಟೋಟೈಪ್ ಅಭಿವೃದ್ಧಿ, ವ್ಯವಹಾರ ಮಾದರಿ ರೂಪಿಸುವಿಕೆ, ಬಿಸಿನೆಸ್ ಪ್ಲಾನ್ ಹಾಗೂ ಪಿಚ್ ಡೆಕ್ ಸಿದ್ಧತೆ, ಬೌದ್ಧಿಕ ಆಸ್ತಿ ಹಕ್ಕುಗಳು, ಸರ್ಕಾರಿ ನೀತಿಗಳು, ಕಾನೂನು ಅನುಸರಣೆ ಹಾಗೂ ಹೂಡಿಕೆ ಅವಕಾಶಗಳ ಕುರಿತು ತಜ್ಞರಿಂದ ತರಬೇತಿ ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಸಮಾರೋಪದ ಗ್ರ್ಯಾಂಡ್ ಡೆಮೊ ಡೇನಲ್ಲಿ ಸ್ಟಾರ್ಟ್‌ಅಪ್‌ಗಳು ತಮ್ಮ ಆವಿಷ್ಕಾರಗಳನ್ನು ಹೂಡಿಕೆದಾರರು ಹಾಗೂ ತಜ್ಞರ ಮುಂದೆ ಪ್ರಸ್ತುತಪಡಿಸಲಿದ್ದು, ಆಯ್ಕೆಯಾಗುವ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳಿಗೆ ಗರಿಷ್ಠ ₹10 ಲಕ್ಷವರೆಗೆ ಇಗ್ನಿಷನ್ ಗ್ರಾಂಟ್ ಹಾಗೂ ಇನ್‌ಕ್ಯುಬೇಷನ್ ಬೆಂಬಲ ದೊರೆಯಲಿದೆ ಎಂದು ಹೇಳಿದರು.
ಈ ವೇಳೆ 2026ರ ಮಾರ್ಚ್ ತಿಂಗಳ ಇಗ್ನಿಷನ್ ಗ್ರಾಂಟ್ ವಿಜೇತರಿಗೆ ಅನುದಾನದ ಚೆಕ್‌ಗಳನ್ನು ವಿತರಿಸಲಾಯಿತು. ಕಲ್ಪವೃಷ್ಟಿ ಕೋಕೋ ಫುಡ್ಸ್ ಸಂಸ್ಥೆಯ ಸಂಸ್ಥಾಪಕ ಶ್ರೀಧರ್ ಅವರಿಗೆ ₹5.50 ಲಕ್ಷ ಹಾಗೂ ಎಜಿಕೇನ್ ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಬಂಗಾರು ಶೆಟ್ಟಿ ಅವರಿಗೆ ₹5 ಲಕ್ಷ ಮೊತ್ತದ ಇಗ್ನಿಷನ್ ಗ್ರಾಂಟ್ ಪ್ರದಾನ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ?ಕನಿಷ್ಠ ವೇತನ ತಡೆ ಪ್ರಸ್ತಾವನೆ ಕೈಬಿಡಿ; ಪರಿಷ್ಕೃತ ವೇತನ ಜಾರಿಗೊಳಿಸಿ: ಹೊರಗುತ್ತಿಗೆ ನೌಕರರ ಆಗ್ರಹ
ಕಾರ್ಯಕ್ರಮದಲ್ಲಿ ಸಿಎಫ್‌ಟಿಆರ್‌ಐ ಹಿರಿಯ ವಿಜ್ಞಾನಿ ಡಾ. ತನಾಜಿ ಜಿ. ಕುಡ್ರೆ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಡಾ. ಕೆ.ಬಿ. ಲಿಂಗರಾಜು, ಸೌತ್ ಇಂಡಿಯನ್ ಏಂಜೆಲ್ ನೆಟ್ವರ್ಕ್‌ನ ಸಿಇಒ ಶ್ರವಣ್ ಮೂರ್ತಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೈಸೂರು ಕ್ಲಸ್ಟರ್ ಮುಖ್ಯಸ್ಥ ಸುರ್ ಕೆ.ಎಸ್. ಸುಧೀರ್ ಸೇರಿದಂತೆ ಹಲವು ಗಣ್ಯರು ಇದ್ದರು.




