ರಾಯಚೂರು | ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಅಧಿಕಾರ: ಚಾಮರಸ ಮಾಲಿ ಪಾಟೀಲ

ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಅಧಿಕಾರ ಎಂದ ಚಾಮರಸ ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕಾರ್ಡ್ ನೀಡಿದ್ದರಿಂದ ರಾಜ್ಯ ವಿಧಾನಸಭೆಯಲ್ಲಿ‌ ಬಹುಮತದಿಂದ ಗೆದ್ದಿದ್ದು ಎಂಬುದು ಅವೈಜ್ಞಾನಿಕ. ಬಿಜೆಪಿಯ ಮಿತಿಮೀರಿದ ಭ್ರಷ್ಟಾಚಾರ, ಕೋಮು‌ ಧೃವೀಕರಣ, ಜಾತಿವಾದದಿಂದ ಬೇಸತ್ತ ಜನರು ಬದಲಾವಣೆ ಬಯಸಿ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಹಾಗಾಗಿ, ಕಾಂಗ್ರೆಸ್‌ ಈಗ ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು ಎಂದು ರೈತ ಸಂಘದ ಗೌರವ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.

ರಾಯಚೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕಳೆದ ಬಿಜೆಪಿ ಸರ್ಕಾರ ಹಲಾಲ್ ಕಟ್, ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಸೇರಿದಂತೆ ಒಂದು ಸಮುದಾಯವನ್ನು ಗುರಿಯಾಗಿಸಿ ಸಮುದಾಯಗಳ ಮಧ್ಯೆ ಎತ್ತಿಕಟ್ಟುವ ಕೆಲಸ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ದುರಾಡಳಿತ, ಜಾತಿವಾದವೇ ಕಾಂಗ್ರೆಸ್ ಗೆಲುವಿಗೆ ಕಾರಣ” ಎಂದು ಹೇಳಿದರು.

“ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಮುಂದೆ ಅನೇಕ ಸವಾಲುಗಳು ಇವೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಚಾರ ಮೀತಿ ಮೀರಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಳೆದ 15 ವರ್ಷಗಳಿಂದ ಜಿಲ್ಲೆ ಮಂತ್ರಿ ಸ್ಥಾನದಿಂದ ವಂಚಿತವಾಗಿತ್ತು. ಪ್ರಸ್ತುತ ಸರ್ಕಾರದಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಸ್ವಾಗತಾರ್ಹ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಜಾಮ ಕಾಲದಲ್ಲಿ ನಿರ್ಮಿಸಿದ ಕೆರೆಗಳು ಸಾಕಷ್ಟು ಇವೆ. ಅವುಗಳ ಪುನರುಜ್ಜಿವನಕ್ಕೆ ಮುಂದಾದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ರಾಜ್ಯ ಮತ್ತು ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲಿಯೇ ರೈತ ಸಂಘ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಹರಿಸಲು ಮನವಿ ಸಲ್ಲಿಸಲಾಗುವುದು‌ ಎಂದರು.

ಈ ಸುದ್ದಿ ಓದಿದ್ದೀರಾ? ಗ್ಯಾರಂಟಿ ಜಾರಿಗೆ ಅಭಿವೃದ್ಧಿ ಅನುದಾನಗಳಿಗೆ ಕತ್ತರಿ ಹಾಕಬೇಡಿ : ಮಾಜಿ ಸಿಎಂ ಬೊಮ್ಮಾಯಿ

“ಜಿಲ್ಲೆಯಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿನ ದರಕ್ಕೆ ಹತ್ತಿ ಮತ್ತು ಮೆಣಸಿನ ಬೀಜ ಮಾರಾಟ ಮಾಡಲಾಗುತ್ತಿದೆ. ಕೃಷಿ ಇಲಾಖೆ ಆಕ್ರಮಕ್ಕೆ ಕಡಿವಾಣ ಹಾಕಬೇಕು. 400 ಗ್ರಾಂ ಹತ್ತಿ ಬೀಜ ₹700 ದರ ಇದ್ದು, ರೈತರಿಗೆ ₹2000ಕ್ಕೆ ಮಾರಾಟ ಮಾಡಿ ವಂಚನೆ ಮಾಡಲಾಗುತ್ತಿದೆ. ಹತ್ತಿ ಬೀಜ ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕ ಸಾವನ್ನಪ್ಪಿರುವುದು ದುರಂತ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಮುಂದಾಗಬೇಕು”ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಬೂದೆಯ್ಯಸ್ವಾಮಿ ಗಬ್ಬೂರು, ಲಿಂಗಾರೆಡ್ಡಿ, ದೇವರಾಜ ನಾಯಕ ಇದ್ದರು.

LEAVE A REPLY

Please enter your comment!
Please enter your name here