ಶಿಕ್ಷಕರ ವರ್ಗಾವಣೆಯಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಂತಾಗಿದ್ದು, ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ರಾಯಚೂರು ಜಿಲ್ಲೆ ದೇವದುರ್ಗದ ಸಾಮಾಜಿಕ ಕಾರ್ಯಕರ್ತ ಶಿವರಾಜ ನಾಯಕ ಆಗ್ರಹಿಸಿದರು.
ರಾಯಚೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಕ್ಷಕರ ಕೊರತೆಯ ಮಧ್ಯೆಯೂ ಶಿಕ್ಷಕರ ವರ್ಗಾವಣೆ ಮಾಡಲಾಗಿದೆ. ಶೇ.42.8ರಷ್ಟು ಶಿಕ್ಷಕರ ಕೊರತೆಯಾಗಿದೆ. ಅವೈಜ್ಞಾನಿಕ ವರ್ಗಾವಣೆಯಿಂದ ಶಿಕ್ಷಕರೇ ಇಲ್ಲದಂತಾಗಿದೆ. ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಶಾಲೆಯಲ್ಲಿ ಐದು ಮಂದಿ ಶಿಕ್ಷಕರಿದ್ದು, ನಾಲ್ಕು ಮಂದಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. 650 ಮಂದಿ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಒಬ್ಬ ಶಿಕ್ಷಕರಿಂದ ಪಾಠ ಪ್ರವಚನ ಮಾಡಲು ಸಾಧ್ಯವೇ?” ಎಂದರು.
“ಕೆ.ಇರಬಗೇರಾ ಗ್ರಾಮದಲ್ಲಿ 7 ಮಂದಿ ಶಿಕ್ಷಕರಿದ್ದು, 6 ಮಂದಿ ಶಿಕ್ಷಕರನ್ನು ವರ್ಗ ಮಾಡಲಾಗಿದೆ. ಮಟ್ಲೇರದೊಡ್ಡಿ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಇಬ್ಬರನ್ನೂ ವರ್ಗಾವಣೆ ಮಾಡಲಾಗಿದೆ. ರಾಮನಾಳದಲ್ಲಿ ಇಬ್ಬರ ಶಿಕ್ಷಕರಲ್ಲಿ ಒಬ್ಬರ ವರ್ಗವಾಗಿ ಒಬ್ಬರು ಮಾತ್ರ ಉಳಿದಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಪೋಸ್ಟಿಂಗ್: ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ಆರೋಪ
ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕಗಳಲ್ಲಿಯೂ ಶಿಕ್ಷಕರಿಲ್ಲದೆ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ. ಜಿಲ್ಲೆಯ ಎಲ್ಲ ಶಾಸಕರುಗಳು ಸರ್ಕಾರದ ಮೇಲೆ ಒತ್ತಡ ಹಾಕಿ ವರ್ಗಾವಣೆಯಾದ ಶಿಕ್ಷಕರ ಹುದ್ದೆಗೆ ಬದಲಿ ಶಿಕ್ಷಕರನ್ನು ನೇಮಿಸಲು ಒತ್ತಡ ಹಾಕಬೇಕು. ಕೆಲವು ಶಾಲೆಗಳು ಅತಿಥಿ ಶಿಕ್ಷಕರಿಂದ ನಡೆಯುತ್ತಿವೆ. ಕೂಡಲೇ ಶಿಕ್ಷಕರ ವರ್ಗಾವಣೆಯಿಂದ ಶಾಲೆಗಳು ಮುಚ್ಚಿ ಹೋಗುವ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊನ್ನಪ್ಪ ನಾಯಕ, ಸಾಬಣ್ಣ ನಾಯಕ ಇದ್ದರು.