ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು, ಬಡ ನಿವೇಶನ ರಹಿತ ಕುಟುಂಬಗಳಿಗೆ ಮನೆ ನಿವೇಶನ ಮತ್ತು ಹಕ್ಕುಪತ್ರಗಳನ್ನು ವಿತರಿಸಬೇಕು ಸೇರಿದಂತೆ ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ನಡೆಯಿತು.
ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು, ಕೃಷಿ ಕೂಲಿಕಾರರು ಹಾಗೂ ವಿವಿಧ ಗ್ರಾಮಗಳ ನಿವಾಸಿಗಳು ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಾ ಟಿಪ್ಪು ಸುಲ್ತಾನ್ ಉದ್ಯಾನವನದವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮುಂಗಾರು ಆರಂಭವಾಗಿದ್ದರೂ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೆಲ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಎಲ್ಲಾ ತಾಲ್ಲೂಕುಗಳಲ್ಲಿ ರೈತರಿಗೆ ಎಂ.ಆರ್.ಪಿ. ದರದಲ್ಲಿ ಅಗತ್ಯ ಪ್ರಮಾಣದ ಬೀಜ ಮತ್ತು ರಸಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದರು.
ರಾಯಚೂರು ಜಿಲ್ಲೆಯಲ್ಲಿ ಸರ್ಕಾರ ಎಂಎಸ್‌ಪಿ ದರದಲ್ಲಿ ಖರೀದಿಸಿರುವ ಜೋಳದ ಬಾಕಿ ಹಣವನ್ನು ಇನ್ನೂ ಅನೇಕ ರೈತರಿಗೆ ಪಾವತಿಸಿಲ್ಲ. ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಹಿಂದಿನಂತೆ ಜೆಸ್ಕಾಂ ಮೂಲಕವೇ ಮುಂದುವರಿಸಬೇಕು. ಟಾಟಾ ಪವರ್‌ಗೆ ವಿದ್ಯುತ್ ವಿತರಣೆಯ ಜವಾಬ್ದಾರಿ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಬಡ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಬೇಕು. ಹಲವು ವರ್ಷಗಳಿಂದ ಸರ್ಕಾರಿ ಜಾಗ ಹಾಗೂ ಆಶ್ರಯ ಕಾಲೋನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ದೇವದುರ್ಗ, ಸಿಂಧನೂರು, ಮಸ್ಕಿ, ಲಿಂಗಸೂಗೂರು ಹಾಗೂ ರಾಯಚೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿನ ಸ್ಮಶಾನ ರಸ್ತೆಗಳ ಅಭಿವೃದ್ಧಿ, ಒತ್ತುವರಿ ತೆರವು, ಬಂಡಿದಾರಿ ತೆರವು, ಹೈಟೆಕ್ ಶೌಚಾಲಯ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು, ಜಿಪಿಎಸ್ ತಾಂತ್ರಿಕ ಸಮಸ್ಯೆ ಪರಿಹರಿಸುವುದು, ಕಾರ್ಮಿಕರಿಗೆ ಪೂರ್ಣ ಕೂಲಿ ಪಾವತಿಸುವುದು ಹಾಗೂ ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದರು.
ರಾಯಚೂರು ತಾಲ್ಲೂಕಿನ ಯಾಪಲದಿನ್ನಿ, ಜಂಬಲದಿನ್ನಿ, ಮಮದಾಪುರ, ಪುಚ್ಚಲದಿನ್ನಿ, ಕೊತ್ತದೂಡ್ಡಿ ಹಾಗೂ ಮಲದೂಡ್ಡಿ ಗ್ರಾಮಗಳ ವಸತಿರಹಿತ ಕುಟುಂಬಗಳಿಗೆ ಮನೆ ನಿರ್ಮಿಸಬೇಕು. ಕೊತ್ತದೂಡ್ಡಿ ಹಾಗೂ ಹೆಗ್ಗಸನಹಳ್ಳಿ ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಯಾಪಲದಿನ್ನಿ, ಮಮದಾಪುರ ಹಾಗೂ ಯರಗುಂಟಾ ಗ್ರಾಮಗಳ ಸಾರ್ವಜನಿಕ ಸ್ಮಶಾನ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪದೇ-ಪದೇ ವಿದ್ಯುತ್ ವ್ಯತ್ಯಯ: ಗ್ರಾಮಸ್ಥರಿಂದ ಪ್ರತಿಭಟನೆ
ಪ್ರತಿಭಟನೆಯಲ್ಲಿ ಕರ್ನಾಟಕ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಪ್ಪ, ಬಸವಂತ್ರಾಯಗೌಡ, ನರಸಣ್ಣ ನಾಯಕ, ಚನ್ನಪ್ಪ ಆನೆಗುಂದಿ, ಕೆ.ಜಿ. ವೀರೇಶ, ಕರಿಯಪ್ಪ ಅಚ್ಚೋಳಿ, ರಂಗನಗೌಡ, ದೇವೇಂದ್ರಗೌಡ, ಶಬ್ಬೀರ್ ಜಾಲಹಳ್ಳಿ, ಹೆಚ್. ಪದ್ಮಾ, ಪೆಂಚಲಯ್ಯ, ರಂಗಪ್ಪ ಯಾಪಲದಿನ್ನಿ ಸೇರಿದಂತೆ ರೈತರು, ಕೃಷಿ ಕೂಲಿಕಾರರು ಮತ್ತು ವಿವಿಧ ಗ್ರಾಮಗಳ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




