ಗ್ರಾಮೀಣ ಆರೋಗ್ಯ ಸೇವೆಯಲ್ಲಿ ವೈದ್ಯರು ಮತ್ತು ತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಮಧ್ಯಪ್ರದೇಶ ಸರ್ಕಾರವು ವಿವಾದಿತ ‘ಪ್ರಾಯೋಗಿಕ ಯೋಜನೆ’ಗೆ ಅನುಮೋದನೆ ನೀಡಿದೆ. ಅದರಂತೆ, ರೇವಾ, ಗುಣಾ ಹಾಗೂ ದೇವಾಸ್ ಜಿಲ್ಲೆಗಳ 18 ಸಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್‌ಸಿ) ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ವಲಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ದೊಡ್ಡ ಪ್ರಯೋಗವೆಂದು ಹೇಳಾಗಿದೆ. ಆದರೆ, ಇದು ಸರ್ಕಾರಿ ಅರೋಗ್ಯ ಕ್ಷೇತ್ರವನ್ನು ಖಾಸಗಿಯವರ ಕೈಗೆ ಹಸ್ತಾಂತರಿಸುವ ಹುನ್ನಾರದ ಭಾಗವೆಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪೈಲಟ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಂಪುಟಕ್ಕೆ ಸಲ್ಲಿಕೆಯಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 327 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 1,320 ವೈದ್ಯರ ಅಗತ್ಯವಿದೆ. ಆದರೆ, ಕೇವಲ 113 ವೈದ್ಯರು ಮಾತ್ರವೇ ಇದ್ದಾರೆ. ಉಳಿದ 1,211 ಹುದ್ದೆಗಳು ವೈದ್ಯರ ನೇಮಕವಾಗದೇ ಖಾಲಿ ಬಿದ್ದಿವೆ.
ಗಮನಾರ್ಹವಾಗಿ, ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪ್ರತಿ 4 ವೈದ್ಯರ ಹುದ್ದೆಗಳಲ್ಲಿ 3 ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 5,443 ತಜ್ಞರ ಹುದ್ದೆಗಳಲ್ಲಿ ಕೇವಲ 1,495 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 3,689 ಹುದ್ದೆಗಳು ಖಾಲಿಯಿವೆ.
ವೈದ್ಯರ ಕೊರತೆ ಮತ್ತು ವೈದ್ಯಕೀಯ ಬಿಕ್ಕಟ್ಟಿನಿಂದಾಗಿ ಮಧ್ಯಪ್ರದೇಶದ ಗ್ರಾಮೀಣ ಭಾಗದ ಬೃಹತ್ ಜನಸಂಖ್ಯೆಗೆ ಶಸ್ತ್ರಚಿಕಿತ್ಸಕರು, ಸಾಮಾನ್ಯ ವೈದ್ಯರು, ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ವೈದ್ಯರ ಸೇವೆಗಳು ಸಿಗುತ್ತಿಲ್ಲ. ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳ ಪ್ರಕಾರ, ಈ ಎಲ್ಲ ತಜ್ಞರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರಬೇಕಾದುದು ಕಡ್ಡಾಯ. ಆದರೆ, ಈ ಮಾನದಂಡಗಳು ಪುಸ್ತಕಕಷ್ಟೇ ಸೀಮಿತವಾಗಿವೆ.
ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ, ಹಳ್ಳಿಗಳ ಮಟ್ಟದಲ್ಲಿ ವೈದ್ಯರ ಕೊರತೆಯೇ ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ ನೀಡಲು ಬಹುದೊಡ್ಡ ಅಡ್ಡಿಯಾಗಿದೆ. ಇದರಿಂದಾಗಿ ಗ್ರಾಮೀಣ ರೋಗಿಗಳು ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಗೂ ನೂರಾರು ಕಿಲೋಮೀಟರ್ ದೂರದ ಜಿಲ್ಲಾ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜುಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೊಸ ಮಾದರಿಯ ಪ್ರಕಾರ, ಸರ್ಕಾರವು ಔಷಧಿಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. ಆದರೆ, ಆಯ್ಕೆಯಾದ ಖಾಸಗಿ ಸಂಸ್ಥೆ, ಟ್ರಸ್ಟ್ ಅಥವಾ ಸಂಘಟನೆಯು ತಜ್ಞ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮತ್ತು ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಆರೋಗ್ಯ ಇಲಾಖೆಯು ನೀಡಿರುವ ಹೇಳಿಕೆಯಲ್ಲಿ, ರೇವಾ, ದೇವಾಸ್ ಹಾಗೂ ಗುಣಾ ಜಿಲ್ಲೆಗಳ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಈ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಸರ್ಕಾರವು ಈ ಕ್ರಮವನ್ನು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವ ಪ್ರಯತ್ನ ಎಂದು ಬಿಂಬಿಸಿದೆ. ಇದರಿಂದ ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಲಿದ್ದು, ಸಣ್ಣಪುಟ್ಟ ಕಾಯಿಲೆಗಳಿಗೂ ದೊಡ್ಡ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಇಲಾಖೆ ಹೇಳಿದೆ. ಈ ಹೊರಗುತ್ತಿಗೆ ಮಾದರಿಯನ್ನು ಆರಂಭದಲ್ಲಿ ಐದು ವರ್ಷಗಳ ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸಲಾಗುವುದು ಮತ್ತು ಇದರ ಫಲಿತಾಂಶಗಳು ಉತ್ತಮವಾಗಿದ್ದರೆ ರಾಜ್ಯದ ಇತರ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!
ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಸರ್ಕಾರದ ನಿರ್ಧಾರವು ಮೇಲ್ನೋಟಕ್ಕೆ ತಕ್ಷಣದ ಸಿಬ್ಬಂದಿ ಕೊರತೆಯನ್ನು ನೀಗಿಸುವ ತಂತ್ರದಂತೆ ಕಾಣುತ್ತಿದೆ. ಆದರೆ, ಇದು ದೀರ್ಘಾವಧಿಯಲ್ಲಿ ಗ್ರಾಮೀಣ ಬಡವರ ಪಾಲಿಗೆ ದೊಡ್ಡ ಅನಾಹುತವಾಗಿ ಪರಿಣಮಿಸುವ ಅಪಾಯವಿದೆ. ಭಾರತದ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೇವಲ ಚಿಕಿತ್ಸಾ ಕೇಂದ್ರಗಳಲ್ಲ, ಬದಲಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಕೋಟ್ಯಂತರ ಜನರಿಗೆ ಇರುವ ಏಕೈಕ ಸಾಮಾಜಿಕ ಆಸರೆ. ಒಮ್ಮೆ ಈ ಕೇಂದ್ರಗಳು ಖಾಸಗಿ ಆಪರೇಟರ್‌ಗಳ ಅಥವಾ ಟ್ರಸ್ಟ್‌ಗಳ ನಿಯಂತ್ರಣಕ್ಕೆ ಹೋದರೆ, ಅಲ್ಲಿ ಸಾರ್ವಜನಿಕ ಸೇವೆಯ ಬದಲಾಗಿ ಲಾಭದಾಯಕತೆ ಮತ್ತು ವ್ಯಾಪಾರಿ ಮನೋಭಾವ ಮುಂಚೂಣಿಗೆ ಬರುತ್ತದೆ.
ಸರ್ಕಾರ ಔಷಧಿಗಳನ್ನು ಮತ್ತು ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದರೂ, ರೋಗಿಗಳಿಗೆ ಅನಗತ್ಯ ರೋಗನಿರ್ಣಯ ಪರೀಕ್ಷೆಗಳನ್ನು ಕಡ್ಡಾಯ ಮಾಡುವುದು, ದುಬಾರಿ ಹೊರಗಿನ ಔಷಧಿಗಳನ್ನು ಶಿಫಾರಸು ಮಾಡುವುದು ಹಾಗೂ ಸಣ್ಣಪುಟ್ಟ ಸಮಸ್ಯೆಗಳಿಗೂ ಶಸ್ತ್ರಚಿಕಿತ್ಸೆಗಳನ್ನು ಹೇರುವ ಮೂಲಕ ಖಾಸಗಿ ಸಂಸ್ಥೆಗಳು ಪರೋಕ್ಷವಾಗಿ ಹಣ ವಸೂಲಿ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದು ಸಾರ್ವಜನಿಕ ಉಚಿತ ಆರೋಗ್ಯ ಸೇವೆಯ ಮೂಲ ಆಶಯವನ್ನೇ ಬುಡಮೇಲು ಮಾಡುತ್ತದೆ. ಬಡವರನ್ನು ಮತ್ತಷ್ಟು ಸಾಲದ ಸುಳಿಗೆ ದೂಡುತ್ತದೆ.
ವೈದ್ಯರ ಮತ್ತು ತಜ್ಞರ ಕೊರತೆಯನ್ನು ನೆಪವಾಗಿಟ್ಟುಕೊಂಡು ಇಡೀ ಆಸ್ಪತ್ರೆಗಳ ನಿರ್ವಹಣೆಯನ್ನೇ ಹೊರಗುತ್ತಿಗೆ ನೀಡುವುದು, ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ಅಧಿಕೃತವಾಗಿ ನುಣುಚಿಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಸರ್ಕಾರಿ ವಲಯದಲ್ಲಿ ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗಲು ನಿರಾಕರಿಸುತ್ತಿದ್ದಾರೆ ಎಂದರೆ, ಅದಕ್ಕೆ ಸರ್ಕಾರದ ಆಡಳಿತಾತ್ಮಕ ವೈಫಲ್ಯವೇ ಕಾರಣ. ತನ್ನ ವೈಫಲ್ಯವನ್ನು ಸರಿಪಡಿಸಿಕೊಳ್ಳುವ ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಸರ್ಕಾರವು ಖಾಸಗಿ ವಲಯಕ್ಕೆ ಶರಣಾಗುತ್ತಿದೆ. ಇದು ಭವಿಷ್ಯದಲ್ಲಿ ಶಿಕ್ಷಣ, ಸಾರಿಗೆಯಂತೆ ಆರೋಗ್ಯ ಕ್ಷೇತ್ರವೂ ಸಂಪೂರ್ಣವಾಗಿ ಖಾಸಗಿಯವರ ಪಾಲಾಗಲು ಮತ್ತು ಸರ್ಕಾರಿ ವ್ಯವಸ್ಥೆ ಹಂತಹಂತವಾಗಿ ನಾಶವಾಗಲು ದಾರಿಯಾಗುತ್ತದೆ.



