ಆಸ್ತಿ ವಿವಾದವು ಕೊಲೆಯಲ್ಲಿ ಕೊನೆಯಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಆಸ್ತಿ ವಿವಾದದಲ್ಲಿ ಜಗಳ ನಡೆದು ಕೊನೆಗೆ ಒಂದೇ ಕುಟುಂಬದ ಐದು ಸದಸ್ಯರು ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದ ಚಡಚಣ ತಾಲ್ಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಮೃತರಲ್ಲಿ ಐವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತರನ್ನು ದುಂಡಪ್ಪ ನಿರಾಲ್ (65), ಶಿವಪುತ್ರ ನಿರಾಲ್ (58), ಚಂದ್ರಕಾಂತ್ ಅಲಿಯಾಸ್ ಚಂದು ನಿರಾಲ್ (55), ರಾಹುಲ್ ನಿರಾಲ್ (25), ಸಮರ್ಥ್ ನಿರಾಲ್ (23) ಮತ್ತು ಶಬ್ಬೀರ್ ಅತ್ತಾರ್ (45) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅರವಿಂದ್ (72) ಮತ್ತು ಸಂದೀಪ್ (33) ಎಂಬ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಆಸ್ತಿ ವಿವಾದ ಹಿನ್ನೆಲೆ ವ್ಯಕ್ತಿಯ ಕೊಲೆ ಆರೋಪಿಗಳ ಬಂಧನ
ಸಂತ್ರಸ್ತರ ಕುಟುಂಬ ಮತ್ತು ಹತ್ತಿರದ ಹಳ್ಳಿಯ ಮತ್ತೊಂದು ಕುಟುಂಬದ ನಡುವೆ ಸುಮಾರು 10 ಎಕರೆ ಜಮೀನಿನ ವಿವಾದವನ್ನು ಪರಿಹರಿಸಲು ಸಂಧಾನ ಸಭೆ ನಡೆದಿದ್ದು, ಈ ವೇಳೆ ಘರ್ಷಣೆ ಉಂಟಾಗಿದೆ. ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ, ಗುಂಡೂ ಹಾರಿಸಲಾಗಿದೆ. ಈ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗ್ರಾಮದ ಹಿರಿಯರು ಈ ಹಿಂದೆ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.




