- ಗ್ರಾಮದಲ್ಲಿ 1,000 ಎಕರೆ ಕಾಫಿ ತೋಟ ಹೊಂದಿರುವ ತಮಿಳುನಾಡಿನ ವ್ಯಕ್ತಿ
- ಮೂಲ ಸೌಕರ್ಯವಿಲ್ಲದ್ದರಿಂದ ವಿವಾಹ ಸಂಬಂಧ ಬೆಳೆಸಲು ಮುಂದಾಗದ ಜನ
ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ಕಾಡಂಚಿನ ದೋನಹಳ್ಳಿ ಮತ್ತು ಬಾಚನಹಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಬಾಚನಹಳ್ಳಿ ಹಾಗೂ ದೋನಹಳ್ಳಿ ಗ್ರಾಮಗಳು ಹೋಬಳಿ ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿವೆ. ಅದರೂ, ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲ. ಕಲ್ಲುಮಣ್ಣಿನ ರಸ್ತೆಯಲ್ಲಿ ನಿತ್ಯ ಓಡಾಡಬೇಕಿದ್ದು, ಪಟ್ಟಣಕ್ಕೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಇಲ್ಲಿನ ನಿವಾಸಿಗಳೊಂದಿಗೆ ವಿವಾಹ ಸಂಬಂಧ ಬೆಳೆಸಲು ಯಾರೂ ಬರುವುದಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ಜೀಪುಗಳನ್ನು ಆಶ್ರಯಿಸಬೇಕಾಗಿದೆ. ಜೀಪುಗಳಿಲ್ಲದಿದ್ದರೆ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಬೇಕಾಗುತ್ತದೆ ಎಂದು ಸಮಸ್ಯೆ ವಿವರಿಸಿದರು.
ಮಳೆಗಾಲದ ಸಂದರ್ಭದಲ್ಲಿ ದೋನಹಳ್ಳಿ ಗ್ರಾಮಸ್ಥರು ಹೆಚ್ಚು ಸಮಸ್ಯೆ ಅನುಭವಿಸಬೇಕಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದೋನಹಳ್ಳಿ ಮತ್ತು ಬಾಚನಹಳ್ಳಿ ಎರಡೂ ಗ್ರಾಮಗಳಲ್ಲಿ ಅಂದಾಜು 500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಸಕಲೇಶಪುರ ಕ್ಷೇತ್ರದ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ರೈತ, ದಲಿತ, ಆದಿವಾಸಿಗಳ ಬೃಹತ್ ಸಮಾವೇಶ
ಗ್ರಾಮದಲ್ಲಿ ತಮಿಳುನಾಡಿನ ವ್ಯಕ್ತಿಯೋಬ್ಬ ಸುಮಾರು 1,000 ಎಕರೆ ಕಾಫಿ ತೋಟ ಹೊಂದಿದ್ದು, ಯಾವುದೇ ಅಭಿವೃದ್ಧಿಗೆ ಕೈಜೋಡಿಸುತ್ತಿಲ್ಲ. ಈ ಎರಡು ಗ್ರಾಮಗಳ ಯುವಕರಿಗೆ ರಸ್ತೆ ಅವ್ಯವಸ್ಥೆ ಹಿನ್ನೆಲೆ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಮುಂದಾಗದ ಕಾರಣ ಹಲವರು ಇನ್ನು ಅವಿವಾಹಿತರಾಗಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.