ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣದಿಂದ ನನ್ನ ವಿರುದ್ಧ, ಚಾಮರಾಜನಗರದಿಂದ ಬಡಪಾಯಿ ಪುಟ್ಟರಂಗಶೆಟ್ಟಿ ವಿರುದ್ಧ ನಿಂತು ಸೋತು ತಲಾ 50 ಕೋಟಿ ಖರ್ಚು ಮಾಡಿರುವ ಸೋಮಣ್ಣನನ್ನ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ತಂದು ನಿಲ್ಲಿಸಿದ್ದಾರೆ. ನಾವು ಮೈಸೂರಿನಿಂದ ಓಡಿಸಿದ್ದು ನೀವು ಇಲ್ಲಿಂದು ಓಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಬಳಿ ಲೋಕಸಭಾ ಚುನಾವಣೆಯ ಅಂಗವಾಗಿ ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ಕ್ಷೇತ್ರಗಳಲ್ಲಿ ನಿಂತು ಸೋತ ಹತ್ತೇ ತಿಂಗಳಲ್ಲಿ ಮತ್ತೊಂದು ಚುನಾವಣೆ ಎದುರಿಸಲು ಬಂದಿದ್ದಾರೆ. ಸೋಮಣ್ಣ ಬಳಿಯಲ್ಲಿ ಎಷ್ಟು ಹಣ ಇರಬಹುದು ಎಂಬುದನ್ನು ಊಹಿಸಿಕೊಳ್ಳಿ. ಸೋಮಣ್ಣ ಲೋಕಸಭೆಗೆ ಹೋದರೆ ತುಮಕೂರು ಜಿಲ್ಲೆಯ ಸಮಸ್ಯೆಗಳನ್ನು ಹೇಳ್ತಾರಾ? ಮೋದಿಯ ಮುಂದೆ ನಿಲ್ಲುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದರು.
ಇಂತಹವರು ಲೋಕಸಭೆಗೆ ಹೋದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಬಿಜೆಪಿ ಪಕ್ಷದವರ ಮನೆ ದೇವರು ಬರೀ ಸುಳ್ಳು. ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಲಾರರು. ಲೂಟಿ ಸರ್ಕಾರದ ಪಾಲುದಾರ ಸೋಮಣ್ಣ ಲೋಕಸಭೆಗೆ ಹೋಗಿ ಮಾಡುವುದಾದರೂ ಏನು ಎಂದು ನೇರ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಆಯ್ಕೆಯಾದ 27 ಮಂದಿ ಬಿಜೆಪಿ ಸಂಸದರಿಗೆ ಕೇಳುತ್ತೇನೆ, ಬರಗಾಲದ ಪರಿಹಾರ ಕೊಡಲಿಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡಲಿಲ್ಲ, 15ನೇ ಹಣಕಾಸಿನ ಶಿಫಾರಸ್ಸು ಮಾಡಿಲ್ಲ. ಇದೇ ರೀತಿ ರಾಜ್ಯಕ್ಕೆ ಪದೇ ಪದೆ ಅನ್ಯಾಯವಾದರೂ ಕೂಡ ಸಂಸದರು ಬಾಯಿ ಬಿಡಲಿಲ್ಲ? ಇಂತಹವರನ್ನು ರಾಜ್ಯದ ಜನತೆ ಬೆಂಬಲಿಸುವ ಅಗತ್ಯವಿಲ್ಲ. ರಾಜ್ಯದ ಜನರ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರತಿಧ್ವನಿಸುವ ಸಮರ್ಥ ಜನಪ್ರತಿನಿಧಿಗಳ ಆಯ್ಕೆ ಮುಖ್ಯ ಎಂದರು.
ಕಳೆದ ಬಾರಿಯ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಒಂದೂ ಮನೆಯನ್ನು ನೀಡಿಲ್ಲದ ಸೋಮಣ್ಣ ಬರೀ ಸುಳ್ಳುಗಾರ. ಮನೆ ಕೊಟ್ಟಿರುವುದಕ್ಕೆ ದಾಖಲೆ ಇದ್ದರೇ ತೋರಿಸಲಿ ಎಂದು ಸಿದ್ದರಾಮಯ್ಯ ನಮ್ಮ ಸರ್ಕಾರದಲ್ಲಿ 14 ಲಕ್ಷಕ್ಕೂ ಅಧಿಕ ಮನೆಗಳನ್ನು ನೀಡಿದ್ದೇವೆ ಎಂದರು.
ಹೆಣ್ಣುಮಕ್ಕಳ ಪ್ರಗತಿ ಆದರೆ ಸಮಾಜದ ಪ್ರಗತಿಯಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ನಂಬಿದ್ದರು. ಅದೇ ರೀತಿಯಲ್ಲಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸ್ತ್ರಿಯರಿಗೆ ಆರ್ಥಿಕವಾಗಿ ಬೆಂಬಲ ನೀಡಿ ವಿದ್ಯಾಭ್ಯಾಸಕ್ಕೆ, ಬಡತನದ ನಿವಾರಣೆಗೆ ನೆರವಿಗೆ ನಿಂತಿದ್ದೇವೆ. ಕುವೆಂಪುರ ಆದರ್ಶದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರ ಮಾತನ್ನು ಸಹಿಸಲು ಆಗುವುದಿಲ್ಲ. ಅದರು ರಾಜ್ಯದ ಮಹಿಳಿಯರ ಕ್ಷಮೆ ಕೇಳುವಂತೆ ನಾನು ಹೇಳುವುದಿಲ್ಲ. ಆದರೆ, ಈಗಾಗಲೇ ರಾಜ್ಯದಾದ್ಯಂತ ಹೆಣ್ಣುಮಕ್ಕಳು ಇವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ ಸತ್ಯಕ್ಕೂ ಸುಳ್ಳಿಗೂ ನಡೆಯುತ್ತಿರುವ ಯುದ್ಧವೇ ಈ ಚುನಾವಣೆ ಆಗಿದೆ. ಕಳೆದ ಬಾರಿ ಮೋದಿಯವರು ನೀಡಿದ ಭರವಸೆಗಳು ಹುಸಿಯಾಗಿದ್ದು, ವಿದೇಶದಿಂದ ಕಪ್ಪು ಹಣ ತಂದು 15 ಲಕ್ಷ ಅಕೌಂಟ್‌ಗೆ ಹಾಕುತ್ತೇನೆ ಎಂದಿದ್ದರು. ಇಲ್ಲಿಯವರೆಗೂ ಅದು ಆಗಿಲ್ಲ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು. ಆದರೆ, ಅದನ್ನು ಸಹ ನೆರವೇರಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ಧಹನುಮೇಗೌಡ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ನಾನು ಕಾರಣ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿರುವ ಕುಮಾರಸ್ವಾಮಿ ಐದು ವರ್ಷ ಏನು ಮಾಡುತ್ತಿದ್ದರು. ದೇವೆಗೌಡರನ್ನು ಸೋಲಿಸಿಲ್ಲ ಎಂದು ಧರ್ಮಸ್ಥಳಕ್ಕೆ ಬೇಡಿದ್ದರೆ ಹೋಗಿ ಪ್ರಮಾಣ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಮುಖಂಡರುಗಳ ಸ್ವಾಗತಕ್ಕೆ ಕೊಬ್ಬರಿ ಹಾರ ಹಾಕಿದ್ದು ವಿಶೇವವಾಗಿದ್ದು, ಕೊಬ್ಬರಿ ಬೆಲೆ ಏರಿಕೆಗೆ ಆದ್ಯತೆ ನೀಡುವಂತೆ ಸಿದ್ಧರಾಮಯ್ಯರ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎಂ.ರಾಜಣ್ಣ, ತಿಪಟೂರು ಶಾಸಕ ಕೆ.ಷಡಕ್ಷರಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಿರಾ ಶಾಸಕ ಜಯಚಂದ್ರ, ಎಂಎಲ್‌ಸಿ ರಾಜೇಂದ್ರ ರಾಜಣ್ಣ, ಮಾಜಿ ಶಾಸಕರುಗಳಾದ ಕಿರಣ್ ಕುಮಾರ್, ರಫಿಕ್ ಅಹಮದ್, ಶಫಿ ಅಹಮದ್, ಬೆಮೆಲ್ ಕಾಂತರಾಜು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್, ನಿಕೇತ್ ರಾಜ್ ಮೌರ್ಯ, ತುಮಕೂರು ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡ, ತಾಲ್ಲೂಕು ಅಧ್ಯಕ್ಷ ಕಾಂತರಾಜು, ಟಿ.ಎನ್.ಪ್ರಕಾಶ್, ನಿಖಲ್ ರಾಜಣ್ಣ, ನ್ಯಾಕೇನಹಳ್ಳಿ ಸುರೇಶ್ ಸೇರಿದಂತೆ ಹಲವರು ಇದ್ದರು.