ತುಮಕೂರಿನ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆ, ಜಿಲ್ಲಾಡಳಿತ ಜನರಿಗೆ ಯಾವ ರೀತಿ ಸ್ಪಂದಿಸಿ ಕೆಲಸ ಮಾಡಿಕೊಡುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.
ಬುಧವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಮೂಲೆ, ಮೂಲೆಗಳಿಂದ ಆಗಮಿಸಿದ ಜನರು ತಮ್ಮ ಸಮಸ್ಯೆ ಇಲ್ಲಿಯಾದರು ಪರಿಹಾರ ಆಗುವ ಆಸೆಗಣ್ಣಿನಲ್ಲಿ ಕಾಯುತ್ತಿದ್ದರು. ಬೆಳಿಗ್ಗೆ ಸಭೆಗೆ ಆಗಮಿಸಿದ ಗೃಹ ಸಚಿವರಿಗೆ ಕಹಳೆ ವಾದ್ಯದ ಮೂಲಕ ಜಿಲ್ಲಾಡಳಿತ ಅದ್ದೂರಿ ಸ್ವಾಗತ ನೀಡಿ ವೇದಿಕೆಗೆ ಕರೆತಂದಿತ್ತು. ಎಸಿ ನಿಯಂತ್ರಿತ ಗ್ರಂಥಾಲಯ ಸಭಾಂಗಣದಲ್ಲಿ ಸಚಿವರು
ಅಧಿಕಾರಿಗಳು ಕುಳಿತು ಜನರ ಸಮಸ್ಯೆ ಆಲಿಸುತ್ತಿದ್ದರೆ. ಟೋಕನ್ ಪಡೆದು ತಮ್ಮ ಸರದಿಗಾಗಿ ಬಿಸಿಲಿನಲ್ಲಿ ಆಚೆ ಜನರು ಕಾದು ಕುಳಿತಿದ್ದರು. ನಡೆಯಲು ಸಾಧ್ಯವಾಗದ ವಯೋವೃದ್ಧರು ಅರ್ಜಿ ಹಿಡಿದು ಬಂದದ್ದು ಅಧಿಕಾರಿಗಳ ಕರ್ತವ್ಯದ ಮಾನದಂಡವನ್ನು ತಿಳಿಯಪಡಿಸಿತು.
ಜನ ಸಂಪರ್ಕ ಸಭೆಗೆ ಬಂದ ಹಲವರಿಗೆ ತಮ್ಮ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತರಲು ಅರ್ಜಿ ಬರೆಯಲು ಬಾರದವರು ಬಂದಿದ್ದರು. ಅವರು ಅರ್ಜಿ ಬರೆಸಿಕೊಳ್ಳಲು ಬರೆಯುವವರನ್ನು ಹುಡುಕಾಡುತ್ತಾ ಓಡಾಡುತ್ತಿದ್ದವರಿಗೆ ಈ ಜನ ಸಂಪರ್ಕ ಸಭೆಯಲ್ಲಿ ಇಷ್ಟು ದಿನದ ಅಲೆದಾಟ ಇಂದಿಗೆ ಮುಗಿಯುತ್ತದೆ ಎಂಬ ಭರವಸೆಯಲ್ಲಿದ್ದರು.
ಇದನ್ನೂ ಓದಿ>ತುಮಕೂರು | “ಸಂಭ್ರಮ-2026” : ಪೋಸ್ಟರ್ ಬಿಡುಗಡೆ ಮಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್
ಈ ಹಿಂದೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಾಲೂಕು ಕೇಂದ್ರಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಆದರೆ ಈ ಸಂಖ್ಯೆಯಲ್ಲಿ ಜನ ಬಂದಿರುವುದನ್ನು ನೋಡಿದರೆ ಜನರ ಬಾಗಿಲಿಗೆ ಸರ್ಕಾರವೋ, ಇಲ್ಲ ಕಚೇರಿ ಬಾಗಿಲಿಗೆ ಜನರೋ ಎನ್ನುವ ಪ್ರಶ್ನೆ ಮೂಡುತ್ತದೆ.

ಜಿಲ್ಲಾಡಳಿತ ವ್ಯವಸ್ಥಿತವಾಗಿ ಜನ ಸಂಪರ್ಕ ಸಭೆ ಆಯೋಜನೆ ಮಾಡದೆ, ಸಚಿವರಿಗೂ ಮುಜುಗರ ತರಿಸುವಂತೆ ಮಾಡಿದೆ. ಅಹವಾಲು ಸಲ್ಲಿಸುವ ಸಮಯದಲ್ಲಿ ಉಂಟಾದ ಗಲಾಟೆ ನಿಯಂತ್ರಿಸಲು ಮುಂದಾದ ಎಸ್.ಪಿ ಅಶೋಕ್, ಶಿರಾದ ಶಾಹಬಾಜ್ ಅಹ್ಮದ್ ಎಂಬುವರ ಕೊರಳಪಟ್ಟಿ ಹಿಡಿದು ಸಭಾಂಗಣದಿಂದ ಹೊರಗಡೆ ಕರೆದುಕೊಂಡು ಹೋದ ಘಟನೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ.
‘ನ್ಯಾಯ ಕೇಳಲು ಬಂದ ನಮ್ಮನ್ನು ಅಧಿಕಾರಿಗಳು ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಶಾಹಬಾಜ್ ನೋವಿನಿಂದ ಹೇಳಿಕೊಂಡಿದ್ದಾರೆ. ಇನ್ನು ಕೆಆರ್ ಎಸ್ ಪಕ್ಷದ ಕಾರ್ಯಕರ್ತರನ್ನು ಸಚಿವರ ಬಳಿ ತಮ್ಮ ಅಹವಾಲು ಸಲ್ಲಿಸಲು ಬಿಡದೆ ಕಾಯಿಸಿ, ಕೊನೆಗೆ ಸಚಿವರು ವೇದಿಕೆ ಮೇಲಿಂದ ಕೆಳಗೆ ಇಳಿದು ಬರುವಾಗ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿ ಗದ್ದಲ ಸೃಷ್ಟಿಯಾಯಿತು.
ಜನರ ಕಷ್ಟಗಳಿಗೆ ಕಿವಿಯಾಗುವುದು, ಅವುಗಳನ್ನು ಪರಿಹರಿಸುವುದು ಆಳುವ ಸರ್ಕಾರಗಳ ಕರ್ತವ್ಯ. ಆದರೆ ಜನರ ಸಮಸ್ಯೆಗಳಿಗೆ ಪ್ರಾಥಮಿಕ ಹಂತದಲ್ಲೇ ಪರಿಹಾರ ನೀಡದೆ ಅದನ್ನು ಹೆಮ್ಮರವಾಗಿಸಿ ಜನರನ್ನು ಅಲೆದಾಡಿಸುವುದು ಉತ್ತಮ ಆಡಳಿತದ ಲಕ್ಷಣವಲ್ಲ.
ಕರ್ನಾಟಕದಲ್ಲಿ ಸಾರ್ವಜನಿಕ ಸೇವೆಗಳು ಸಮರ್ಪಕವಾಗಿ ನಿರ್ವಹಿಸಲೆಂದು ಆಡಳಿತದಲ್ಲಿ ಹಲವು ಸುಧಾರಣೆ ತರಲಾಗಿದೆ. ಹಾಗೆ ರಾಜ್ಯ ಸರ್ಕಾರ ‘ಮನೆ ಬಾಗಿಲಿಗೆ ಸರ್ಕಾರ’ ಪರಿಕಲ್ಪನೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆಗಳನ್ನು ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿದೆ. ಈ ಎಲ್ಲದರ ನಡುವೆ ಅಧಿಕಾರಿಗಳ ನಿರ್ಲಕ್ಷ್ಯ, ಮಂದಗತಿಯ ಕಾರ್ಯನಿರ್ವಹಣ ವಿಧಾನಗಳಿಂದ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ.
ಈ ಸಭೆಯಲ್ಲಿ ಒಟ್ಟು 700 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೆ ಹೆಚ್ಚಿದ್ದು. ಎಲ್ಲಾ ಅರ್ಜಿಗಳಿಗೂ ತ್ವರಿತ ಪರಿಹಾರ ದೊರೆಯುತ್ತದೆಯೋ ಅಥವ ಮುಂದಿನ ಸಭೆಗೂ ಈ ಅರ್ಜಿಗಳು ಉಳಿಕೆಯಾಗುತ್ತದೋ ಕಾದು ನೋಡಬೇಕಿದೆ.
ಜನರ ಸಮಸ್ಯೆ ಪರಿಹಾರಕ್ಕೆ ಜನ ಸಂಪರ್ಕ ಸಭೆ ವೇದಿಕೆಯಾಗಬೇಕಿತ್ತು ಆದರೆ, ಇಂದು ನಡೆದ ಸಭೆ ಜನ ಸಂಪರ್ಕ ಸಭೆಯೋ, ಜನ ನಿಯಂತ್ರಣ ಸಭೆಯೋ ಎಂಬ ಪ್ರಶ್ನೆ ಹುಟ್ಟು ಹಾಕಿದೆ.




