ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿಯೂ ರೇಡಿಯೋ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ರೂಪ ಬದಲಿಸಿಕೊಳ್ಳುತ್ತದೆಯೇ ಹೊರತು ತನ್ನ ಅಸ್ತಿತ್ವವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಅ.5ರಿಂದ 7ರವರೆಗೆ ಆಯೋಜಿಸಿರುವ ಮೂರು ದಿನಗಳ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಡಿಯೋ ಸೇರಿದಂತೆ ಧ್ವನಿ ಮಾಧ್ಯಮದಲ್ಲಿ ಭಾಷೆ, ಧ್ವನಿಯ ಏರಿಳಿತ, ಸಮಯದ ಮಿತಿ ಹಾಗೂ ಪ್ರಸ್ತುತಪಡಿಸುವ ಕೌಶಲ್ಯ ಅತ್ಯಂತ ಮುಖ್ಯ. 30 ಸೆಕೆಂಡ್‌ನಿಂದ ಮೂರು ನಿಮಿಷದವರೆಗೆ ಮಾತ್ರ ಪ್ರೇಕ್ಷಕರು ಅಥವಾ ಕೇಳುಗರ ಏಕಾಗ್ರತೆ ಉಳಿಯುವ ಸಂದರ್ಭದಲ್ಲಿ ಸರಳ ಹಾಗೂ ಪರಿಣಾಮಕಾರಿ ವಾಕ್ಯ ರಚನೆ ಅಗತ್ಯ ಎಂದರು.

ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು, ಕಲಿಕೆಯ ಹಂತದಲ್ಲಿಯೇ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪತ್ರಿಕೋದ್ಯಮ ಕ್ಷೇತ್ರವು ಸೃಜನಶೀಲತೆಯ ಜತೆಗೆ ಹಲವು ಜ್ಞಾನಶಾಖೆಗಳನ್ನು ಒಳಗೊಂಡಿದ್ದು, ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಡಾ. ಬಾಲಗುರುಮೂರ್ತಿ, ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಕೇವಲ ವರದಿಗಾರಿಕೆಗೆ ಸೀಮಿತರಾಗದೆ ವಿವಿಧ ಜ್ಞಾನಶಾಖೆಗಳ ಪುಸ್ತಕಗಳನ್ನು ಓದಬೇಕು. ಪತ್ರಕರ್ತರಿಗೆ ಸಮಾಜದ ಎಲ್ಲ ಕ್ಷೇತ್ರಗಳ ಪರಿಚಯವಿರಬೇಕು. ಇಲ್ಲದಿದ್ದರೆ ಪತ್ರಿಕೋದ್ಯಮ ಕೇವಲ ‘ಕ್ಲೇರಿಕಲ್ ಹುದ್ದೆ’ಯಾಗಿ ಉಳಿಯಲಿದೆ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವದಲ್ಲಿ ಇನ್ನೂ ಧ್ವನಿಹೀನರಾಗಿರುವ ದೊಡ್ಡ ಸಮುದಾಯವನ್ನು ತಲುಪುವ ಸೂಕ್ಷ್ಮತೆ ಪತ್ರಕರ್ತರಲ್ಲಿ ಇರಬೇಕು. ಅವಕಾಶ ವಂಚಿತವಾಗಿರುವ ‘ಏಕಲವ್ಯ ಪ್ರತಿಭೆ’ಗಳನ್ನು ಗುರುತಿಸಿ ಮಾಧ್ಯಮಗಳು ಅವಕಾಶ ಕಲ್ಪಿಸಬೇಕು. ಕ್ಷಣಿಕ ಜನಪ್ರಿಯತೆ ಮತ್ತು ಟಿಆರ್‌ಪಿಗಾಗಿ ಸುಳ್ಳು ಮಾಹಿತಿಯ ಮೊರೆ ಹೋಗದೆ, ಉತ್ತಮ ಓದು ಮತ್ತು ಗುಣಮಟ್ಟದ ವಿಷಯಗಳಿಗೆ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಶ್ವೇತಾರಾಣಿ ಎಚ್. ಮಾತನಾಡಿ, ಡಿಜಿಟಲ್ ಯುಗದಲ್ಲಿ ‘ಲೈಕ್ಸ್’, ‘ಶೇರ್’ ಮತ್ತು ‘ಕಮೆಂಟ್’ಗಳ ಹಿಂದೆ ಬೀಳದೆ, ವಿಷಯದ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವ ಪಕ್ವತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ಕಾರ್ಯಾಗಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಡಾ. ಬಿ.ಟಿ. ಮುದ್ದೇಶ್ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ., ಶ್ವೇತಾ ಎಂ.ಪಿ., ಕೋಕಿಲ ಎಂ.ಎಸ್., ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿ ಎಚ್.ಜಿ., ರೇಖಾ, ರಮೇಶ್ ಮಣ್ಣೆ, ಎನ್‌ಸಿಸಿ ಅಧಿಕಾರಿ ಶ್ರೀನಿವಾಸ್‌ಮೂರ್ತಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹೊರತಂದ ‘ಸಿದ್ಧಾರ್ಥ ಸಂಪದ’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.




