ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಈವರೆಗೆ ಸುಮಾರು ₹159 ಕೋಟಿ ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬರ ಅಧ್ಯಯನಕ್ಕೆ ಆಗಮಿಸಿದ್ದ ಅಂತರ ಸಚಿವಾಲಯ ಕೇಂದ್ರ ತಂಡ (IMCT)ಕ್ಕೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಪಂಚಾಯತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಂಡಕ್ಕೆ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿದ ಅವರು, ಮಳೆ ಕೊರತೆ, ಶುಷ್ಕ ವಾತಾವರಣ, ತೇವಾಂಶ ಕುಸಿತ ಹಾಗೂ ಬಿತ್ತನೆ ಕಾರ್ಯ ಕುಂಠಿತವಾಗಿರುವುದೇ ನಷ್ಟಕ್ಕೆ ಕಾರಣ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ 10 ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ. ನೈರುತ್ಯ ಮುಂಗಾರು ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಯಂತೆ 348 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ಸುರಿದಿದ್ದು ಕೇವಲ 184 ಮಿ.ಮೀ. ಮಾತ್ರ. ಇದರಿಂದ ಶೇ.47ರಷ್ಟು ಮಳೆ ಕೊರತೆ ಎದುರಾಗಿದ್ದು, ಪ್ರಮುಖ ಬಿತ್ತನೆ ಅವಧಿಯಲ್ಲೇ ಸಮರ್ಪಕ ಮಳೆ ಆಗದ ಕಾರಣ ನಿರೀಕ್ಷಿತ ಇಳುವರಿ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಸುಮಾರು 5,15,603 ರೈತರಿದ್ದಾರೆ. ಮುಂಗಾರು ಹಂಗಾಮಿನ ವಾಡಿಕೆ ಬಿತ್ತನೆ ವಿಸ್ತೀರ್ಣ 3,11,657 ಹೆಕ್ಟೇರ್ ಇದ್ದು, ಮಳೆ ಕೊರತೆಯಿಂದ 2,19,935 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ.
ಬಿತ್ತನೆ ಪ್ರಮಾಣ ಶೇ.72ರಷ್ಟಿದ್ದರೂ, ಅನಾವೃಷ್ಟಿಯಿಂದ ಬೆಳೆಗಳು ಬಾಡಿವೆ. ಸಕಾಲದಲ್ಲಿ ಹೂ ಬಿಡದೆ ಕಾಳು ಕಟ್ಟುತ್ತಿಲ್ಲ. ರಾಗಿ, ಶೇಂಗಾ ಸೇರಿದಂತೆ ಪ್ರಮುಖ ಬೆಳೆಗಳ ಮೇಲೆ ಬರದ ಪರಿಣಾಮ ಬಿದ್ದಿದೆ. ಒಟ್ಟಾರೆ ಅಂದಾಜು 1,92,128 ಹೆಕ್ಟೇರ್ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ತೆರಳಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಬೆಳೆ ಹಾನಿ, ಇಳುವರಿ ಕುಸಿತ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೋರ್‌ವೆಲ್‌ಗಳಲ್ಲಿ ನೀರು ಸಿಗದಿರುವ ಸ್ಥಿತಿಯನ್ನು ಕೇಂದ್ರ ತಂಡಕ್ಕೆ ಮನದಟ್ಟು ಮಾಡಿಕೊಡಲಾಯಿತು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು, ನೀತಿ ಆಯೋಗದ ಅಮರಿಂದರ್ ಸಿಂಗ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ನಿರ್ದೇಶಕ ಡಾ. ಜೆ. ಹರ್ಷ ಸೇರಿದಂತೆ ತಂಡದ ಸದಸ್ಯರು ಹಾಜರಿದ್ದರು. ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೂ ಉಪಸ್ಥಿತರಿದ್ದರು.




