ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್. ಹೊಸಹಳ್ಳಿ ಗ್ರಾಮದಲ್ಲಿ ನವಜಾತ ಶಿಶುವಿನ ಅರ್ಧ ಶವ ನಾಯಿಯ ಬಾಯಲ್ಲಿ ಪತ್ತೆಯಾಗಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸುಮಾರು ಮೂರು ದಿನದ ನವಜಾತ ಶಿಶುವಿನ ಅರ್ಧ ಶರೀರವನ್ನು ನಾಯಿ ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು ನಾಯಿಯಿಂದ ಶವವನ್ನು ಬಿಡಿಸಿದ್ದಾರೆ. ಬಳಿಕ ಗ್ರಾಮದ ಮನೆಯೊಂದರ ಕಾಂಪೌಂಡ್‌ನಲ್ಲಿ ಶಿಶುವಿನ ಉಳಿದ ಭಾಗ ಪತ್ತೆಯಾಗಿದೆ.
ಘಟನೆ ಕುರಿತು ಗ್ರಾಮಸ್ಥರು ಕೂಡಲೇ ಪೊಲೀಸ್, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್‌ಪಿ ಶೇಖರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳವನ್ನೂ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ನವಜಾತ ಶಿಶು ಕಾಣೆಯಾಗಿರುವ ಕುರಿತು ಮಾಹಿತಿ ಸಂಗ್ರಹಿಸಲಾಗಿದ್ದು, ಇದುವರೆಗೆ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಶಿಶುವಿನ ಗುರುತು ಹಾಗೂ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




