ತುಮಕೂರು ನಗರ ಸಮೀಪದ ಬೆಳಗುಂಬದಲ್ಲಿ ನಡುರಸ್ತೆಯಲ್ಲೇ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಮಲ್ಲ ಅಲಿಯಾಸ್ ವೀರಣ್ಣ (42) ಅವರನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದೆ. ಬೆಳಗುಂಬ ಗ್ರಾಮದ ಗರುಡ ಕೆಫೆ ಮುಂಭಾಗ ರಾತ್ರಿ ಸುಮಾರು 8.30 ಗಂಟೆ ವೇಳೆಗೆ ಈ ಭೀಕರ ಕೃತ್ಯ ನಡೆದಿದೆ.
ಮೃತ ಮಲ್ಲ ಬೆಳಗುಂಬ ನಿವಾಸಿಯಾಗಿದ್ದು, ಮನೆ ಸಮೀಪದಲ್ಲೇ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಮಲ್ಲನ ದೇಹ ಗುರುತಿಸಲಾಗದಷ್ಟು ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಾಹಿತಿಯಂತೆ, 2008ರಲ್ಲಿ ನಡೆದ ಗಡ್ಡರಾಜು ಕೊಲೆ ಪ್ರಕರಣದಲ್ಲಿ ಮಲ್ಲ ಆರೋಪಿಯಾಗಿದ್ದು, ವಡ್ಡರಹಳ್ಳಿ ಕ್ರಾಸ್ ಬಳಿ ನಡೆದಿದ್ದ ಆ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಬಳಿಕ ಆತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹತ್ಯೆಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದ್ದು, ಹಳೆಯ ವೈಷಮ್ಯ ಅಥವಾ ಗ್ಯಾಂಗ್ ವೈಮನಸ್ಸಿನ ಹಿನ್ನೆಲೆ ಇರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.





