ನಾಡು ಮತ್ತು ಕಾಡು ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿರುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಹಾಗೂ ನದಿಗಳ ಪುನಶ್ಚೇತನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಹೆಚ್. ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಂಪನ್ಮೂಲ ಅಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಸಂಸ್ಥೆ, ಧಾನ್ಯ ಸಂಸ್ಥೆ ಹಾಗೂ ವೃಕ್ಷಮಿತ್ರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ದೇವರಾಯನದುರ್ಗದಲ್ಲಿ ಆಯೋಜಿಸಿದ್ದ ಜಯಮಂಗಲಿ ನದಿ ನಡಿಗೆ ಜಾಥಾ, ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಯಮಂಗಲಿ ನದಿಯ ಹುಟ್ಟು, ವಿಕಾಸ, ಚರಿತ್ರೆ, ನದಿಯ ನಕ್ಷೆ, ಪರಿಸರ ಮತ್ತು ಜಲ ಸಂರಕ್ಷಣೆ, ಕೃಷಿ ವೈವಿಧ್ಯತೆ ಹಾಗೂ ನದಿ ಮೂಲದ ಸ್ವಚ್ಛತೆ ಕುರಿತು ಸ್ವಯಂಸೇವಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ತುಮಕೂರು ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಕೆ.ಜಿ. ಪರಶುರಾಮ್ ಮಾತನಾಡಿ, ಜಯಮಂಗಲಿ ನದಿ ತುಮಕೂರು ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾಗಿದ್ದು, ಇದರೊಂದಿಗೆ ಹಲವು ಐತಿಹಾಸಿಕ ನಿರ್ಮಾಣಗಳು ಮತ್ತು ಜನಜೀವನದ ಸಂಬಂಧ ಬೆಸೆದುಕೊಂಡಿದೆ ಎಂದರು.
1933ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಬಳಿ ನದಿಗೆ ಕಲ್ಲಿನ ಅಣೆಕಟ್ಟು ನಿರ್ಮಿಸಿದ್ದರು. 1949ರಲ್ಲಿ ಮೈಸೂರು ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಮಧುಗಿರಿ ತಾಲೂಕಿನ ಪುರವರ ಬಳಿ ನದಿ ದಾಟಲು ಅನುಕೂಲವಾಗುವಂತೆ ಸೇತುವೆ ನಿರ್ಮಿಸಿದ್ದರು. 1985ರಲ್ಲಿ ಕೊರಟಗೆರೆ ತಾಲೂಕಿನ ತೀತಾ ಗ್ರಾಮದ ಬಳಿ ಜಲಾಶಯ ನಿರ್ಮಿಸಲಾಗಿದ್ದು, ಇವುಗಳು ಇಂದಿಗೂ ಸುಭದ್ರವಾಗಿವೆ ಎಂದು ಹೇಳಿದರು.

1970 ಮತ್ತು 80ರ ದಶಕಗಳಲ್ಲಿ ಪ್ರತಿ ವರ್ಷ ಕನಿಷ್ಠ ಎರಡು–ಮೂರು ತಿಂಗಳಾದರೂ ಜಯಮಂಗಲಿ ನದಿ ಹರಿಯುತ್ತಿತ್ತು. ಉಳಿದ ಅವಧಿಯಲ್ಲಿಯೂ ನದಿ ಪಾತ್ರದ ಸುತ್ತಮುತ್ತಲಿನ ಬಾವಿಗಳು, ಕೆರೆಗಳು ಹಾಗೂ ತಲಪರಿಗೆಗಳು ನೀರಿನಿಂದ ಸಮೃದ್ಧವಾಗಿರುತ್ತಿದ್ದವು. ಆದರೆ 1990ರ ದಶಕದ ನಂತರ ಮರಳು ಗಣಿಗಾರಿಕೆ, ಒತ್ತುವರಿ, ಕಾಡು ನಾಶ, ನದಿ ಪಾತ್ರದಲ್ಲಿ ಸೀಮೆಜಾಲಿ ಬೆಳವಣಿಗೆ, ಅಂತರ್ಜಲ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ನದಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿ ನೀಡಿರುವ ಈ ಅಮೂಲ್ಯ ಕೊಡುಗೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ನಾಗಭೂಷಣ ಬಗ್ಗನಡು ಮಾತನಾಡಿ, ಜಯಮಂಗಲಿ ನದಿಯು ದೇವರಾಯನದುರ್ಗದಲ್ಲಿ ಹುಟ್ಟಿ ಆಂಧ್ರಪ್ರದೇಶದ ಸಂಗಮೇಶ್ವರದಲ್ಲಿ ಉತ್ತರ ಪಿನಾಕಿನಿ ನದಿಯನ್ನು ಸೇರುತ್ತದೆ. ಸುಮಾರು 110 ಕಿ.ಮೀ. ಉದ್ದ ಹೊಂದಿರುವ ಈ ನದಿ ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಆಂಧ್ರಪ್ರದೇಶದ ಮಡಕಸಿರಾ ತಾಲೂಕುಗಳಲ್ಲಿ ಹರಿಯುತ್ತದೆ ಎಂದರು.
ಮಾವತ್ತೂರು ಕೆರೆಯಿಂದ ಹರಿಯುವ ಗರುಡಾಚಲ ಹಾಗೂ ಸಿದ್ದರಬೆಟ್ಟದಿಂದ ಬರುವ ಸುವರ್ಣಮುಖಿ ನದಿಗಳು ಜಯಮಂಗಲಿಯ ಪ್ರಮುಖ ಉಪನದಿಗಳಾಗಿವೆ. ಹಿಂದೆ ನಿರಂತರವಾಗಿ ಹರಿಯುತ್ತಿದ್ದ ಜಯಮಂಗಲಿ ನದಿ ಮರಳು ಗಣಿಗಾರಿಕೆ ಸೇರಿದಂತೆ ವಿವಿಧ ಮಾನವ ಚಟುವಟಿಕೆಗಳಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ನದಿಯನ್ನು ಪುನಶ್ಚೇತನಗೊಳಿಸಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ದೇವರಾಯನದುರ್ಗದಲ್ಲಿ ಆಯೋಜಿಸಿರುವ ಪರಿಸರ ಮತ್ತು ಜಲ ಸಂರಕ್ಷಣೆ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಡಾ. ಜಿ.ಬಿ. ಶಿವರಾಜು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಮೋಹನ ಹೆಚ್.ಎಸ್., ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ. ಜಿ. ದಾಕ್ಷಾಯಣಿ, ಸಿಂಡಿಕೇಟ್ ಸದಸ್ಯರಾದ ಶಿವಣ್ಣ ಎಂ., ಪ್ರಿಯದರ್ಶಿನಿ ಆರ್., ತಿಪ್ಪೇಸ್ವಾಮಿ ಹೆಚ್., ಪರಿಸರ ತಜ್ಞ ಮಲ್ಲಿಕಾರ್ಜುನ್ ಹೊಸಪಾಳ್ಯ, ತುಮಕೂರಿನ ಆರ್ಡರ್ ಸಂಸ್ಥೆಯ ರಘು ಜಿ.ವಿ., ವೃಕ್ಷಮಿತ್ರ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.




