ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾಳೆಯೇ ಹೋಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
“ಜನರು ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳುತ್ತಿದ್ದರು. ಆದರೆ ಯಾರು ಹೇಳಬೇಕಿತ್ತೋ ಅವರು ಹೇಳಲಿಲ್ಲ. ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತನ ಮಗ ಮೇಲೆ ಬರುವುದು ತುಂಬಾ ಕಷ್ಟ. ಯಾರ ತಲೆ ಹೊಡೆದು ಹಣ ಸಂಪಾದನೆ ಮಾಡಿರಬೇಕು ಅಂತಹವರು ಮಾತ್ರ ಮೇಲಕ್ಕೆ ಬರುತ್ತಾರೆ. ನಮಗೆ ಗಾಡ್‌ಫಾದರ್ ಇರಲಿಲ್ಲ. ಅದಕ್ಕಾಗಿಯೇ ಸಚಿವ ಸ್ಥಾನ ತಪ್ಪಿದೆ” ಎಂದು ಅಸಮಾಧಾನ ಹೊರಹಾಕಿದರು.
“ನಮಗೆ ಯೋಗ್ಯತೆ ಇಲ್ಲ ಎಂಬುದಾಗಿ ಅರ್ಥ ಮಾಡಿಕೊಳ್ಳುತ್ತೇನೆ. ನನ್ನ ಪ್ರಾಮಾಣಿಕತೆಯನ್ನು ಗುರುತಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಈಗ ರಾಜಕೀಯದ ಹೊಸ ಪಾಠ ಅರ್ಥವಾಗುತ್ತಿದೆ. ಪ್ರಾಮಾಣಿಕತೆಗೆ ಎಷ್ಟು ಬೆಲೆ ಇದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ರಾಜಕೀಯ ಡಬಲ್ ಗೇಮ್ ಮತ್ತು ಮೋಸದಿಂದ ಕೂಡಿದೆ. ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆ, ಆದರೆ ಅವಕಾಶ ವಂಚಿತನಾಗಿದ್ದೇನೆ” ಎಂದು ಹೇಳಿದರು.
ತುಮಕೂರು ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟ ಅವರು, “ಬಡವನ ಕೋಪ ದವಡೆಗೆ ಮೂಲ. ಇನ್ನೂ ಒಂದೂವರೆ ವರ್ಷ ಸಮಯ ಇದೆ. ಕಾರ್ಯಕರ್ತರು ಏನು ತೀರ್ಮಾನ ಮಾಡುತ್ತಾರೋ ನೋಡೋಣ” ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದ ಕುರಿತು ಮಾತನಾಡಿದ ಅವರು, “ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ. ಅಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾಳೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.




