ಜನನವಾದ ಕೆಲವೇ ಗಂಟೆಗಳಲ್ಲಿ ಜೀವ-ಸಾವಿನ ನಡುವೆ ಹೋರಾಟ ನಡೆಸುತ್ತಿದ್ದ ನವಜಾತ ಶಿಶುವಿಗೆ ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡ ಹೊಸ ಬದುಕು ನೀಡಿದೆ. ನವಜಾತ ಶಿಶುಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಕರುಳಿನ ಅಡಚಣೆ (Hirschsprung Disease) ಎಂಬ ಗಂಭೀರ ಕಾಯಿಲೆಯನ್ನು ಸಕಾಲದಲ್ಲಿ ಗುರುತಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯರು ಮತ್ತೊಂದು ಜೀವವನ್ನು ಉಳಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಕುಟುಂಬವೊಂದರಲ್ಲಿ ಜನಿಸಿದ ಈ ಶಿಶುವಿಗೆ ಜನನದ 18 ಗಂಟೆಗಳಲ್ಲೇ ಹೊಟ್ಟೆ ಉಬ್ಬುವುದು, ಪಿತ್ತರಸದ ವಾಂತಿ ಹಾಗೂ ಕರುಳಿನ ಚಲನೆ ಇಲ್ಲದಿರುವಂತಹ ಅಪಾಯಕಾರಿ ಲಕ್ಷಣಗಳು ಕಾಣಿಸಿಕೊಂಡಿದ್ದವು. ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಡಾ. ಸುಬ್ರಮಣ್ಯ ನೇತೃತ್ವದ ತಜ್ಞರ ತಂಡ ತಕ್ಷಣವೇ ಅಗತ್ಯ ಪರೀಕ್ಷೆಗಳನ್ನು ನಡೆಸಿತು. ಮಗುವಿಗೆ ಕರುಳಿನ ಅಡಚಣೆ ಕಾಯಿಲೆ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ವಿಳಂಬ ಮಾಡದೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ತಜ್ಞ ವೈದ್ಯರು ಮತ್ತು ನವಜಾತ ಶಿಶು ಆರೈಕೆ ವಿಭಾಗದ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದರಿಂದ ಮಗು ಸಂಪೂರ್ಣ ಚೇತರಿಸಿಕೊಂಡಿದೆ.
ಹಿರ್ಶಸ್ಪ್ರಂಗ್ ಕಾಯಿಲೆ ಎನ್ನುವುದು ನವಜಾತ ಶಿಶುಗಳಲ್ಲಿ ಕಂಡುಬರುವ ಅಪರೂಪದ ಜನ್ಮಜಾತ ಸಮಸ್ಯೆಯಾಗಿದೆ. ಈ ಕಾಯಿಲೆಯಲ್ಲಿ ಕರುಳಿನ ಒಂದು ಭಾಗದಲ್ಲಿ ನರಕೋಶಗಳು ಸರಿಯಾಗಿ ಬೆಳೆಯದ ಕಾರಣ ಮಲ ಸಾಗುವುದಕ್ಕೆ ಅಡಚಣೆ ಉಂಟಾಗುತ್ತದೆ. ಪರಿಣಾಮವಾಗಿ ಹೊಟ್ಟೆ ಉಬ್ಬುವುದು, ಹಸಿರು ಬಣ್ಣದ ವಾಂತಿ, ಮಲ ವಿಸರ್ಜನೆ ಆಗದಿರುವುದು ಸೇರಿದಂತೆ ಹಲವು ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸುಮಾರು 2,000 ಜೀವಂತ ಜನನಗಳಲ್ಲಿ ಒಬ್ಬ ಶಿಶುವಿಗೆ ಈ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮಗುವಿನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದರೂ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಮನ್ವಯದಿಂದ ಚಿಕಿತ್ಸೆ ನೀಡಿದರು. ಒಂದು ವಾರದ ಚಿಕಿತ್ಸೆ ಮತ್ತು ಆರೈಕೆಯ ನಂತರ ಮಗು ಆರೋಗ್ಯಕರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
“ನವಜಾತ ಶಿಶುವಿನಲ್ಲಿ ಹೊಟ್ಟೆ ಉಬ್ಬುವುದು, ಮಲ ವಿಸರ್ಜನೆ ಆಗದಿರುವುದು ಅಥವಾ ಹಸಿರು ಬಣ್ಣದ ವಾಂತಿ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿದರೆ ಜೀವ ಉಳಿಸಬಹುದು” ಎಂದು ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಸುಬ್ರಮಣ್ಯ ಸಲಹೆ ನೀಡಿದ್ದಾರೆ.
“ನಮ್ಮ ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸಿದ್ದಾರ್ಥ ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ನಮ್ಮ ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯವಾಗಿದೆ. ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಗೆ ನಾವು ಸದಾ ಋಣಿಯಾಗಿರುತ್ತೇವೆ” ಎಂದು ಮಗುವಿನ ಪೋಷಕರು ಭಾವುಕರಾಗಿ ತಿಳಿಸಿದ್ದಾರೆ.
ಈ ಅಪರೂಪದ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಪರಿಣತಿ ಹಾಗೂ ಆಧುನಿಕ ಚಿಕಿತ್ಸಾ ಸೌಲಭ್ಯಗಳಿಗೆ ಸಾಕ್ಷಿಯಾಗಿದೆ ಎಂದು ಆಸ್ಪತ್ರೆಯ ಉಪಪ್ರಾಂಶುಪಾಲ ಡಾ. ಜಿ.ಎನ್. ಪ್ರಭಾಕರ್ ತಿಳಿಸಿದ್ದಾರೆ. ಗಂಭೀರ ಮತ್ತು ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಆಸ್ಪತ್ರೆಯ ತಜ್ಞರ ತಂಡ ಸದಾ ಸಜ್ಜಾಗಿದೆ ಎಂದೂ ಅವರು ಹೇಳಿದ್ದಾರೆ.
ನವಜಾತ ಶಿಶುವಿನ ಜೀವ ಉಳಿಸಿದ ಈ ಯಶಸ್ವಿ ಶಸ್ತ್ರಚಿಕಿತ್ಸೆ, ಸಕಾಲದ ರೋಗನಿರ್ಣಯ, ಆಧುನಿಕ ವೈದ್ಯಕೀಯ ಸೌಲಭ್ಯ ಹಾಗೂ ತಜ್ಞ ವೈದ್ಯರ ಸಮರ್ಪಣೆಯಿದ್ದರೆ ಅಪರೂಪದ ಕಾಯಿಲೆಗಳನ್ನೂ ಗೆಲ್ಲಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.





