ಎಸ್ಐಆರ್ ಪ್ರಕ್ರಿಯೆಯಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಶಾಲಾ- ಕಾಲೇಜುಗಳು, ಗ್ರಾಮೀಣ ಭಾಗದಲ್ಲಿ ಜಾಗೃತಿ ಆಂದೋಲನ ನಡೆಸಲು ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಜನಸ್ಪಂದನ ಟ್ರಸ್ಟ್, ಜನಪರ ಸಂಘಟನೆಗಳಿಂದ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಐಆರ್ ಕುರಿತ ದುಂಡು ಮೇಜಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ಜನ ಜಾಗೃತಿ ಮೂಡಿಸುವ ಜತೆಗೆ ತರಬೇತಿ ಕಾರ್ಯಾಗಾರ ಆಯೋಜನೆ, ಕಾನೂನು ಸಲಹೆ ನೀಡುವುದು. ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ಮಾಡುವುದು. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

‘ಅರ್ಹ ಮತದಾರರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಈ ಕುರಿತು ಜನರಲ್ಲಿ ಮೂಡಿರುವ ಪೂರ್ವಗ್ರಹ ದೂರ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕು’ ಎಂದು ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ. ಬಿ. ಶಶಿಧರ್ (ಟೂಡ) ಹೇಳಿದರು.
ಜಿಲ್ಲೆಯ ಎಲ್ಲ ಭಾಗದಲ್ಲಿ ಜನ ಸ್ಪಂದನ ಟ್ರಸ್ಟ್ ಮೂಲಕ ಎಸ್ಐಆರ್ ಪ್ರಕ್ರಿಯೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಜನಪರ ಸಂಘಟನೆಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ತಿಪಟೂರಿನಲ್ಲಿ ಜೂನ್ 19. ರಂದು ಜಾಗೃತಿ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದು ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ. ಬಿ. ಶಶಿಧರ್ (ಟೂಡ) ಹೇಳಿದರು.

ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ ‘ಸಂವಿಧಾನ ನೀಡಿದ ಮತದಾನದ ಹಕ್ಕು ಎಲ್ಲರಿಗೂ ಸಿಗಬೇಕು. ಯಾರೊಬ್ಬರೂ ಹಕ್ಕಿನಿಂದ ವಂಚಿತರಾಗಬಾರದು. ಜನಾಧಿಕಾರ ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೈಗೊಂಡಿರುವ ಎಸ್ಐಆರ್ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಬೇಕು. ಸಾರ್ವಜನಿಕರಿಗೆ ಪೂರಕ ದಾಖಲೆ ಸಲ್ಲಿಸುವ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.

ಚಿಂತಕ ಕೆ.ದೊರೈರಾಜ್ ಮಾತನಾಡಿ ಎಸ್ಐಆರ್ ಕುರಿತು ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆಯ ಕಾನೂನು ಸರಳೀಕರಣ ಮಾಡಬೇಕು. ವಿದ್ಯಾರ್ಥಿ, ಯುವ ಸಮೂಹ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಎಸ್ಐಆರ್ ಕುರಿತು ಹೆಚ್ಚಿನ ಜನರನ್ನು ತಲುಪಲು ಸಾಮಾಜಿಕ ಜಾಲ ತಾಣ ಬಳಸಿಕೊಳ್ಳಬೇಕು. ವಿಡಿಯೊ, ರೀಲ್ಸ್ ಮೂಲಕ ಯುವ ಜನರನ್ನು ತಲುಪಬೇಕು. ಮತದಾನದ ಹಕ್ಕಿನ ಮಹತ್ವ, ಶಕ್ತಿಯ ಬಗ್ಗೆ ಅರಿವು ಮೂಡಿಸಬೇಕು. ಸಂವಿಧಾನ ನೀಡಿದ ಮತದಾನದ ಮೌಲ್ಯದ ಕುರಿತು ತಿಳಿ ಹೇಳಬೇಕು’ ಎಂದರು
ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಸಿ. ಯತಿರಾಜು, ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್. ಮಧುಕರ್, ವಕೀಲ ಕಿಶೋರ್, ಸಿಐಟಿಯು ಜಿಲ್ಲಾಧ್ಯಕ್ಷ ಮುಜೀಬ್, ತಾಜ್ ಉದ್ದೀನ್ ಷರೀಫ್, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಂಜುನಾಥ್ ಹೆತ್ತೇನಹಳ್ಳಿ, ಸಿಂಡಿಕೇಟ್ ಸದಸ್ಯ ಶಿವಣ್ಣ, ಸ್ಲಂ ಜನಾಂದೋಲನದ ಎ. ನರಸಿಂಹಮೂರ್ತಿ, ಎದ್ದೇಳು ಕರ್ನಾಟಕದ ಇಂದಿರಮ್ಮ, ರಾಮಕೃಷ್ಣಪ್ಪ, ಸಂಶೋಧನಾರ್ಥಿಗಳಾದ ರಾಹುಲ್, ಗಂಗಾಧರ್ ಬಾಣಸಂದ್ರ, ಅಮರ್ ಹೊಳೆಗದ್ದೆ, ಸೀಮಾ ಅಫೀಕಾ, ಪಾತಲಿಂಗಯ್ಯ, ಪಾರ್ವತಿ, ಡಿವೖಎಫ್ಐ ರಾಘವೇಂದ್ರ, ಜಾಗೃತ ಕರ್ನಾಟಕದ ಮಂಜುಳ ಸೇರಿದಂತೆ ವಿವಿಧ ಜನಪರ ಸಂಘಟನೆಯವರು ಹಾಜರಿದ್ದರು
.





