ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬರು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಕಲ್ಲೂರ(ಕೆ) ಗ್ರಾಮದಲ್ಲಿ ಗುರುವಾರ ನಡೆದಿದೆ.
ಸಿದ್ದಮ್ಮ (30) ನಾಕ್ಕೋಡಿ ಕೊಲೆಯಾದ ಮಹಿಳೆ. ಪತಿ ಭೂತಾಳಿ ನಾಕ್ಕೋಡಿ (40) ಕೊಚ್ಚಿ ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.
ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಪತ್ನಿಯೊಂದಿಗೆ ಮನೆಯಲ್ಲಿ ಕುಡಿದು ಬಂದು ಪದೇಪದೇ ಗಲಾಟೆ ಮಾಡುತ್ತಿದ್ದ ಗಂಡ ಭೂತಾಳಿಗೆ ಹಿರಿಯರು ಹಲವು ಬಾರಿ ಬುದ್ದಿವಾದ ಹೇಳಿದರು. ಅದೇ ವಿಚಾರವಾಗಿ ಗುರುವಾರ ಕಬ್ಬಿನ ಹೊಲಕ್ಕೆ ಹೋಗುವ ನೆಪದಲ್ಲಿ ಕರೆದೊಯ್ದ ಗಂಡ ಹೊಲಕ್ಕೆ ತೆರಳುವ ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ಮನಬಂದಂತೆ ಥಳಿಸಿ ಮಚ್ಚಿನಿಂದ ಹಲ್ಲೆಗೈದು ಪರಾರಿಯಾಗಿದ್ದಾನೆ. ಹಲ್ಲೆ ಪರಿಣಾಮ ಸಿದ್ದಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ : ಬೀದರ್ | ದೈಹಿಕ ಶಿಕ್ಷಣ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
ಈ ಸಂಬಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಷ್ಟೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ಲೋಕೇಶ, ಸರ್ಕಲ್ ಇನ್ಸ್‌ಪೆಕ್ಟರ್ ಬಾಪುಗೌಡ ಪಾಟೀಲ, ಅಪರಾಧ ವಿಭಾಗದ ಪಿಎಸ್‌ಐ ಜ್ಯೋತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





