ಜುಲೈ 3 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸಮಿತಿಯ ಆಶ್ರಯದಲ್ಲಿ ದಲಿತ ಜನಾಗ್ರಹ ಸಮಾವೇಶ ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ 10 ಬಸ್‌ಗಳಲ್ಲಿ ಸುಮಾರು 500 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗಿಳಿಯಾರು ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್, ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ ಧರ್ಮಪತ್ನಿ ಇಂದಿರಾ ಕೃಷ್ಣಪ್ಪ ಸೇರಿದಂತೆ ರಾಜ್ಯ ಸಮಿತಿಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್, ರಮೇಶ್ ಡಾಕುಳಗಿ, ಈರೇಶ್ ಹೀರೇಹಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ಸಿದ್ದರಾಜು ದೊಡ್ಡಿಂದವಾಡಿ, ಹೆಚ್. ಹುಸೇನಪ್ಪ ಹಾಗೂ ಸಿದ್ದಪ್ಪ ಕಾಂಬ್ಳೆ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದಲ್ಲದೆ ರಾಜ್ಯದ ಬುದ್ಧಿಜೀವಿಗಳು, ಪ್ರಗತಿಪರರು, ಸಾಹಿತಿಗಳು, ಬರಹಗಾರರು ಹಾಗೂ ರೈತ ಮುಖಂಡರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶೇಷ ಘಟಕ ಯೋಜನೆ ಹಣವನ್ನು ನಿಯಮಬಾಹಿರವಾಗಿ ಸೆಕ್ಷನ್ 24ರ ಕಾಯ್ದೆ ಉಲ್ಲಂಘಿಸಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕೆ ನೀಡಿರುವ 200ಕೋಟಿ ರೂ. ಅಧಿಕ ಹಣವನ್ನು ಮರು ವಸೂಲಿ ಮಾಡಬೇಕು. ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿಗೊಳಿಸಬೇಕು. ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ದಲಿತ ಸಮುದಾಯಗಳಿಗೆ ಭೂಮಿ ಮತ್ತು ವಸತಿ ಹಂಚಿಕೆ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಉದ್ಯೋಗ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಯ ಏಕಗವಾಕ್ಷಿ ನೀತಿಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು, ಜಿಲ್ಲಾ ಸಮಿತಿಯ ಸದಸ್ಯ ಸುರೇಶ್ ಬಾರ್ಕೂರು, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸಂದರ ತೆಕ್ಕಟ್ಟೆ ಉಪಸ್ಥಿತರಿದ್ದರು.






