ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಉಡುಪಿಯ ಅಜ್ಜರಕಾಡಿನಲ್ಲಿ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ಇದರ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಉಜ್ವಲ ಯೋಜನೆ ಮೂಲಕ ಸಬ್ಸಿಡಿ ಕಡಿತಗೊಳಿಸಿ ಮಹಿಳೆಯರಿಗೆ ಸಂಕಷ್ಟ ತಂದಿದ್ದಾರೆ ಎಂದು ಆರೋಪಿಸಿದರು. “ಕರೋನಾ ಸಮಯದಲ್ಲಿ 140 ಕೋಟಿ ಜನರನ್ನು ರಕ್ಷಿಸುತ್ತೇನೆ, ತೈಲ ಮತ್ತು ಅಡುಗೆ ಅನಿಲದ ಕೊರತೆ ಇಲ್ಲ ಎಂದು ಭರವಸೆ ನೀಡಿದ ಸರ್ಕಾರ, ಇದೀಗ ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಗ್ಯಾಸ್ ಲಭ್ಯವಾಗದ ಪರಿಸ್ಥಿತಿ ಉಂಟಾಗಿದೆ. ಇದು ಕೇಂದ್ರ ಸರ್ಕಾರದ ವೈಫಲ್ಯ” ಎಂದು ಅವರು ಟೀಕಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅಮೇರಿಕಾ ಮತ್ತು ಇಸ್ರೇಲ್ ಕೈಗೊಂಡ ಯುದ್ಧವು ಕೇವಲ ಇರಾನ್ ವಿರುದ್ಧವಲ್ಲ, ಜಗತ್ತಿನ ಜನರ ಮೇಲಿನ ದಾಳಿ ಎಂದು ಹೇಳಿದರು. ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, “ಈ ಯುದ್ಧಗಳಿಂದ ವಿಶ್ವದಾದ್ಯಂತ ಆಹಾರ ಮತ್ತು ಇಂಧನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ” ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಿಶಿಧರ ಗೊಲ್ಲ, ಅಮೇರಿಕಾದ ಯುದ್ಧಕೋರ ನೀತಿಯನ್ನು ನಾವು ಖಂಡಿಸುತ್ತಿದ್ದೇವೆ. ಈ ಯುದ್ಧಗಳಿಂದಾಗಿ ಪ್ರಪಂಚದಾದ್ಯಂತ ಆಹಾರದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ಗ್ಯಾಸ್ ಕೊರತೆಯೂ ಎದುರಾಗಬಹುದು. ಇಂತಹ ಯುದ್ಧಗಳನ್ನು ನಾವು ಯಾವಾಗಲೂ ಖಂಡಿಸಲೇಬೇಕು ಎಂದು ಹೇಳಿದರು.
ಯುದ್ಧಗಳು ಸಾಮಾನ್ಯ ಜನರ ಹಿತಕ್ಕಾಗಿ ನಡೆಯುವುದಿಲ್ಲ; ಬಂಡವಾಳಶಾಹಿಗಳು ತಮ್ಮ ಲಾಭಕ್ಕಾಗಿ ನಡೆಸುತ್ತಿರುವುದು ಈಗ ಸ್ಪಷ್ಟವಾಗಿದೆ. ಅಮೇರಿಕಾ ಈ ಯುದ್ಧವನ್ನು ನಡೆಸುತ್ತಿರುವ ಪ್ರಮುಖ ಕಾರಣ ಅದರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದೇ ಆಗಿದೆ. ಅಲ್ಲಿನ ಸರ್ಕಾರಿ ನೌಕರರಿಗೆ ಸಹ ಸಂಬಳವನ್ನು ಸಮಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ; ಎರಡು ತಿಂಗಳ ಸಂಬಳ ಇನ್ನೂ ಬಾಕಿಯಿದೆ ಎಂಬ ವರದಿಗಳನ್ನು ನಾವು ಪತ್ರಿಕೆಗಳಲ್ಲಿ ನೋಡಿದ್ದೇವೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟವನ್ನು ಬೇರೆಡೆಗೆ ತಿರುಗಿಸಲು ಟ್ರಂಪ್ ಈ ಯುದ್ಧವನ್ನು ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಸ್ರೇಲ್ ಪ್ರಧಾನಿಯ ವಿರುದ್ಧ ಅಲ್ಲಿನ ಜನರಲ್ಲಿ ಅಸಮಾಧಾನವಿದ್ದು, ಅದನ್ನು ತಗ್ಗಿಸಲು ಕೂಡ ಈ ಯುದ್ಧವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇರಾನ್ ಬಳಿ ಅಣು ಬಾಂಬ್ ಎಂದವರಿಗೆ, ಇದುವರೆಗೆ ಅದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ ಇರಾನ್ ತನ್ನ ಸ್ಥಾನವನ್ನು ದೃಢವಾಗಿ ಕಾಯ್ದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಸೇರಿದಂತೆ ಹಲವರು ಯುದ್ಧ ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿದರು. ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಶಶಿಕಲಾ, ನಳಿನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ವೇಳೆ ಪ್ರತಿಭಟನಾಕಾರರು ಒಲೆಯಲ್ಲಿ ಕಾಫಿ ತಯಾರಿಸಿ ಕುಡಿಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು.






