ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಲವು ವರ್ಷಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದವರು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರಲ್ಲವೇ? ಈ ದೇಣಿಗೆ ಹಣದ ಸಂಪೂರ್ಣ ಲೆಕ್ಕವನ್ನು ದೇಶದ ಜನರಿಗೆ ಬಹಿರಂಗಪಡಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖಂಡರು ಹಾಗೂ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಲು 1989ರಿಂದಲೇ ಶ್ರೀರಾಮಚಂದ್ರನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದೆ. ನಂತರ ದೇಶದಾದ್ಯಂತ ಮನೆಮನೆಗೆ ತೆರಳಿ ಇಟ್ಟಿಗೆ ಸೇರಿದಂತೆ ವಿವಿಧ ರೂಪಗಳಲ್ಲಿ ದೇಣಿಗೆ ಸಂಗ್ರಹಿಸಿ, ರಾಮ ಮಂದಿರ ನಿರ್ಮಾಣದ ವಿಚಾರವನ್ನು ಜನರ ನಡುವೆ ನಿರಂತರವಾಗಿ ಪ್ರಚಾರ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ ಸರ್ಕಾರ ನೀಡಿದ ಉಚಿತ ಅಕ್ಕಿಗೆ ಅರಿಶಿನ ಬೆರೆಸಿ, ಅದನ್ನು ಅಯೋಧ್ಯ ಶ್ರೀರಾಮ ಮಂದಿರದ ಶ್ರೀರಾಮದೇವರ ಮಂತ್ರಾಕ್ಷತೆ ಎಂದು ಹೇಳಿ ಮನೆಮನೆಗೆ ತೆರಳಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೇವರ ಹೆಸರಿನಲ್ಲಿ ಮತ್ತು ಹಿಂದುತ್ವದ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆದು ರಾಜಕೀಯ ಲಾಭ ಪಡೆಯುವ ಪ್ರಯತ್ನ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದಕ್ಕೆ ಶ್ರೀರಾಮನ ಹೆಸರಿನ ರಾಜಕೀಯವೂ ಪ್ರಮುಖ ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ರೀತಿಯ ರಾಜಕೀಯ ನಾಟಕ ನಡೆಯುವುದಿಲ್ಲ ಎಂಬುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.
ಶ್ರೀರಾಮ ಮಂದಿರದ ಹೆಸರಿನಲ್ಲಿ ಎಷ್ಟು ವರ್ಷಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ, ಎಷ್ಟು ಹಣ ಸಂಗ್ರಹವಾಗಿದೆ ಹಾಗೂ ಅದನ್ನು ಯಾವ ರೀತಿಯಲ್ಲಿ ಬಳಸಲಾಗಿದೆ ಎಂಬ ಸಂಪೂರ್ಣ ಲೆಕ್ಕವನ್ನು ಕೂಡಲೇ ದೇಶದ ಜನರ ಮುಂದೆ ಇಡಬೇಕು ಎಂದು ಅವರು ಆಗ್ರಹಿಸಿದರು.
ದೇವರು ಮತ್ತು ಹಿಂದುತ್ವದ ಹೆಸರಿನಲ್ಲಿ ಮತಯಾಚನೆ ಮಾಡುವುದನ್ನು ಬಿಟ್ಟು, ತಮ್ಮ ಸರ್ಕಾರಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಬಂದು ಚುನಾವಣೆ ಎದುರಿಸಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಸವಾಲು ಹಾಕಿದರು.






