ಉಡುಪಿ ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಾರಾಯಣ ಗುರು ಮಂದಿರದ ಸಮೀಪ ಹೆದ್ದಾರಿಯ ಕಾಂಕ್ರೀಟ್ ಬಿರುಕು ಬಿಟ್ಟಿದ್ದು, ದೊಡ್ಡ ಗುಂಡಿಯಾಗಿ ಮಾರ್ಪಟ್ಟಿದೆ. ಕಾಂಕ್ರೀಟ್ ಒಳಗಿದ್ದ ಕಬ್ಬಿಣದ ಸರಳುಗಳು (ರಾಡ್‌ಗಳು) ಮೇಲಕ್ಕೆ ಬಂದಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗಿದೆ.
ನಿತ್ಯ ವಾಹನ ದಟ್ಟಣೆ ಇರುವ ಈ ಹೆದ್ದಾರಿಯಲ್ಲಿ ರಸ್ತೆ ಹಾಳಾಗಿರುವುದರಿಂದ ಅಪಘಾತದ ಭೀತಿ ಹೆಚ್ಚಾಗಿದೆ. ಸ್ಥಳೀಯರ ಪ್ರಕಾರ, ಇದೇ ಸ್ಥಳದಲ್ಲಿ ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಈ ಅಪಾಯಕಾರಿ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಮೃತ್ಯುಕೂಪದಂತಾಗಿರುವ ಈ ಗುಂಡಿಯನ್ನು ತಕ್ಷಣ ಮುಚ್ಚಿ, ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.






