ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ, ಸಹಬಾಳ್ವೆ ಉಡುಪಿ, ಸಿಐಟಿಯು, ಭಾರತೀಯ ಕ್ರೈಸ್ತ ಒಕ್ಕೂಟ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಪ್ರಯುಕ್ತ “ದೇಶಾಭಿಮಾನಿ ಸಮಾವೇಶ”ವನ್ನು ಏಪ್ರಿಲ್ 26ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ದಿನ ಸಂಜೆ 3.30ಕ್ಕೆ ಉಡುಪಿಯ ಬೋರ್ಡ್ ಹೈಸ್ಕೂಲ್‌ನಿಂದ ಭವ್ಯ ಸಾಂಸ್ಕೃತಿಕ ಜಾಥಾ ಆರಂಭಗೊಳ್ಳಲಿದೆ ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಹತ್ತುಕ್ಕೂ ಹೆಚ್ಚು ಟ್ಯಾಬ್ಲೊಗಳು ದೇಶಭಕ್ತಿ ಸಾರುವ ಕಲಾತಂಡಗಳೊಂದಿಗೆ ಜಾಥೆಯಲ್ಲಿ ಭಾಗವಹಿಸಲಿವೆ. ಜನರಲ್ಲಿ ದೇಶಾಭಿಮಾನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐದುರಿಂದ ಆರು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಂಜೆ ಬಳಿಕ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ನಟ ದುನಿಯಾ ವಿಜಯ್ ಉದ್ಘಾಟಿಸಲಿದ್ದಾರೆ. ಸಮಾಜಸೇವಕ ಡಾ. ಎಚ್.ಎಸ್. ಶೆಟ್ಟಿ ಅವರಿಗೆ “ಭೀಮ ಸಾರಥಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಸುಂದರ್ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಸಹಬಾಳ್ವೆ ಸಂಘಟನೆಯ ಫಣಿರಾಜ್, ಕ್ಯಾಥೋಲಿಕ್ ಸಭಾದ ಮೆಲ್ವಿನ್ ಅರನ್ಹಾ, ರಥಬೀದಿ ಗೆಳೆಯರು ಸಂಘಟನೆಯ ನಾಗೇಶ್ ಕುಮಾರ್ ಉದ್ಯಾವರ, ಮುಸ್ಲಿಂ ಒಕ್ಕೂಟದ ಇರ್ಶಾದ್ ನೇಜಾರ್, ಇಸ್ಮಾಯಿಲ್ ಹುಸೈನ್ ಕಟ್ಟಾಡಿ, ಅಲ್ಪಸಂಖ್ಯಾತರ ವೇದಿಕೆಯ ಚಾರ್ಲ್ಸ್ ಅಂಬ್ಲರ್ ಹಾಗೂ ಸಿಐಟಿಯು ಪ್ರತಿನಿಧಿ ಕವಿರಾಜ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಧ್ಯಮ ಕಾರ್ಯದರ್ಶಿ ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.







