ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಕರ್ನಾಟಕದಲ್ಲಿಯೂ ತೀವ್ರ ಪರಿಣಾಮ ಬೀರಿದ್ದು, ಉಡುಪಿ ಜಿಲ್ಲೆಯಲ್ಲಿ ಎಲ್‌ಪಿಜಿ (Auto LPG) ದರ ಭಾರೀ ಏರಿಕೆಯೊಂದಿಗೆ ಗ್ಯಾಸ್ ಅಭಾವ ಉಂಟಾಗಿದೆ. ಇದರಿಂದ ಸಾವಿರಾರು ಆಟೋ ಚಾಲಕರು ದೈನಂದಿನ ಬದುಕಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 15,000ಕ್ಕೂ ಹೆಚ್ಚು ಎಲ್‌ಪಿಜಿ ಆಧಾರಿತ ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ಉಡುಪಿ ನಗರದಲ್ಲೇ 3,000ಕ್ಕೂ ಅಧಿಕ ಆಟೋಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು–ಐದು ಎಲ್‌ಪಿಜಿ ಬಂಕ್‌ಗಳಲ್ಲಿ ಸಮರ್ಪಕ ಗ್ಯಾಸ್ ಲಭ್ಯವಿಲ್ಲದೆ ಚಾಲಕರು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯುದ್ಧಕ್ಕೂ ಮುನ್ನ ಲೀಟರ್‌ಗೆ ₹62.30 ಇದ್ದ ಎಲ್‌ಪಿಜಿ ದರ ಈಗ ₹92, ₹105ರಿಂದ ₹130ರವರೆಗೆ ಏರಿಕೆಯಾಗಿದೆ. ಒಂದೊಂದು ಬಂಕ್‌ನಲ್ಲಿ ಒಂದೊಂದು ದರ ವಿಧಿಸಲಾಗುತ್ತಿದ್ದು, ನಿಗದಿತ ದರ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಎಲ್‌ಪಿಜಿ ಅಭಾವದಿಂದ ಆಟೋ ಚಾಲಕರು ದಿನಕ್ಕೆ 3–4 ಗಂಟೆಗಳ ಕಾಲ ಬಂಕ್‌ಗಳಲ್ಲಿ ಕ್ಯೂನಲ್ಲಿ ನಿಲ್ಲಬೇಕಾಗಿದ್ದು, ಇದರಿಂದ ದಿನದ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಕೆಲವೊಮ್ಮೆ ಗಂಟೆಗಳ ಕಾಲ ಕಾಯ್ದು ಕೂಡ ಗ್ಯಾಸ್ ಸಿಗದೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ.
“ಗ್ಯಾಸ್ ಇಲ್ಲದೆ ದುಡಿಮೆ ಇಲ್ಲ, ದುಡಿಮೆ ಇಲ್ಲದೆ ಜೀವನವೇ ಇಲ್ಲ”
ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ನಗರದ ರಿಕ್ಷಾ ಮಾಲಕರು ಮತ್ತು ಚಾಲಕರ ಸಂಘದ ಕಾರ್ಯದರ್ಶಿ ಪ್ರಸಾದ್ ಪೂಜಾರಿ, ಉಡುಪಿ ನಗರದಲ್ಲಿ ಎಲ್‌ಪಿಜಿ ಆಟೋ ಗ್ಯಾಸ್ ತೀವ್ರ ಅಭಾವ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಎಲ್‌ಪಿಜಿ ಆಟೋ ಗ್ಯಾಸ್ ಬೆಲೆ ಲೀಟರ್‌ಗೆ ₹130 ತಲುಪಿದರೂ, ಬಂಕ್‌ಗಳಲ್ಲಿ ಗ್ಯಾಸ್ ಸಿಗದೆ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಗ್ಯಾಸ್ ಪಡೆಯಲು ಬಂಕ್‌ಗಳಿಗೆ ತೆರಳಿ ದೀರ್ಘ ಸಾಲಿನಲ್ಲಿ ನಿಂತರೂ, ಕೊನೆಯಲ್ಲಿ “ಗ್ಯಾಸ್ ಇಲ್ಲ” ಎಂದು ಹಿಂದಿರುಗಿಸಲಾಗುತ್ತಿದೆ. ಇದರ ಪರಿಣಾಮವಾಗಿ ಪ್ರಯಾಣಿಕರನ್ನು ಸಾಗಿಸಲು ಹಾಗೂ ಬಾಡಿಗೆ ನಡೆಸಲು ತೀವ್ರ ತೊಂದರೆ ಉಂಟಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಪರಿಸ್ಥಿತಿ ಉಂಟಾಗುವ ಮೊದಲು ಗ್ಯಾಸ್ ಬೆಲೆ ₹62 ಇದ್ದು, ಇದೀಗ ₹130ಕ್ಕೆ ಏರಿಕೆಯಾಗಿದೆ. ಹೆಚ್ಚಿನ ದರಕ್ಕೂ ಗ್ಯಾಸ್ ಲಭ್ಯವಾಗದಿರುವುದು ಚಾಲಕರ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಹೇಳಿದರು.

“ಸ್ಟಾಕ್ ಇಲ್ಲ, ಆದರೆ ತರಿಸಿ ಕೊಡುತ್ತೇವೆ, ದರ ₹130” ಎಂದು ಬಂಕ್ ಸಿಬ್ಬಂದಿ ಹೇಳುತ್ತಿರುವುದರಿಂದ, ಇಂತಹ ಪರಿಸ್ಥಿತಿಯಲ್ಲಿ ಬಾಡಿಗೆ ನಡೆಸುವುದು ಹೇಗೆ ಎಂಬುದು ಅಸಾಧ್ಯವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಗ್ಯಾಸ್ ತುಂಬಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಉಡುಪಿ ಶಾಸಕರು ಹಾಗೂ ಸಂಸದರು ತಕ್ಷಣ ಗಮನ ಹರಿಸಿ, ಗ್ಯಾಸ್ ಸರಬರಾಜು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ದರ ಹೆಚ್ಚಿರುವುದರಿಂದ ಪ್ರಯಾಣಿಕರಿಂದ ಬಾಡಿಗೆ ಪಡೆಯುವುದೂ ಕಷ್ಟವಾಗುತ್ತಿದೆ. ಕೆಲ ಪ್ರಯಾಣಿಕರು ಪರಿಸ್ಥಿತಿಯನ್ನು ಅರಿತು ₹5–₹10 ಹೆಚ್ಚಾಗಿ ನೀಡುತ್ತಿರುವುದಾಗಿ ಅವರು ಹೇಳಿದರು.
ಇತರ ಪ್ರದೇಶಗಳಲ್ಲಿ ಎಲ್‌ಪಿಜಿ ಗ್ಯಾಸ್ ಲಭ್ಯವಿದೆ ಎಂದು ಹೇಳಲಾಗುತ್ತಿದ್ದರೂ, ಉಡುಪಿ ನಗರದಲ್ಲಿ ಮಾತ್ರ ಈ ರೀತಿಯ ಅಭಾವ ಏಕೆ ಉಂಟಾಗಿದೆ ಎಂಬುದು ಅಸ್ಪಷ್ಟವಾಗಿದೆ. “ಗ್ಯಾಸ್ ಇಲ್ಲದೆ ಆಟೋ ಚಾಲಕರಿಗೆ ದುಡಿಮೆ ಇಲ್ಲ, ದುಡಿಮೆ ಇಲ್ಲದೆ ಜೀವನವಿಲ್ಲ” ಎಂದು ಪ್ರಸಾದ್ ಪೂಜಾರಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಆಟೋ ಚಾಲಕ ಅಶ್ವಿನ್, “ಎಲ್‌ಪಿಜಿ ಆಟೋ ಗ್ಯಾಸ್ ಸಮಸ್ಯೆ ತೀವ್ರವಾಗಿ ಎದುರಾಗಿದೆ. ಗ್ಯಾಸ್ ದರ ಸಹ ಬಹಳಷ್ಟು ಏರಿಕೆಯಾಗಿದೆ. ಈ ವಿಷಯವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದೇವೆ, ಆದರೆ ಇದುವರೆಗೆ ಯಾರೂ ಗಮನ ಹರಿಸುತ್ತಿಲ್ಲ. ಆಟೋ ಇದ್ದರೂ ಬಾಡಿಗೆಗೆ ಹೋಗಲು ಸಾಧ್ಯವಾಗದೇ, ಮನೆಯಲ್ಲಿ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಗಳಿಗೆ ಇಎಂಐ ಮತ್ತು ಇನ್ಶೂರೆನ್ಸ್ ಕಟ್ಟಬೇಕಿದೆ, ಆದರೆ ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ.

ಪ್ರಸ್ತುತ ಗ್ಯಾಸ್ ದರ ಲೀಟರ್‌ಗೆ ₹130 ಆಗಿದ್ದರೂ, ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣ ಗ್ಯಾಸ್ ಲಭ್ಯತೆ ಕಲ್ಪಿಸಿ, ದರವನ್ನು ಕಡಿಮೆ ಮಾಡಬೇಕು,” ಎಂದು ಆಗ್ರಹಿಸಿದರು.
“ಯುದ್ಧ ನಡೆಯುತ್ತಿರುವುದು ವಿದೇಶದಲ್ಲಿ ಆದರೂ, ಅದರ ಪರಿಣಾಮವನ್ನು ಅನುಭವಿಸಬೇಕಾಗಿರುವುದು ನಾವು. ಇದು ನಮ್ಮ ಜೀವನಕ್ಕೆ ದೊಡ್ಡ ಹೊಡೆತವಾಗಿದೆ,” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಹಿರಿಯ ಆಟೋ ಚಾಲಕ ಸ್ಟ್ಯಾನ್ಲಿ ಬಂಗೇರ, “ಗ್ಯಾಸ್ ತುಂಬಿಸಲು ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲಬೇಕು. ಮನೆ ಖರ್ಚು, ರಿಕ್ಷಾ ಖರ್ಚು ಎಲ್ಲವೂ ಹೆಚ್ಚಾಗಿದೆ. ಎಲ್ಲಾ ಬಂಕ್‌ಗಳಲ್ಲಿ ಸಮರ್ಪಕ ಗ್ಯಾಸ್ ಸಿಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಸರಬರಾಜಿನಲ್ಲಿ ವ್ಯತ್ಯಯ – ಬಂಕ್ ನಿರ್ವಾಹಕರ ಸ್ಪಷ್ಟನೆ

ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಬನ್ನಂಜೆ ಗೋ ಗ್ಯಾಸ್ ವ್ಯವಸ್ಥಾಪಕ ಶಬರೀಶ್ “ಕಂಪನಿಯಿಂದಲೇ ಗ್ಯಾಸ್ ಸರಬರಾಜು ಕಡಿಮೆಯಾಗುತ್ತಿದೆ. ಸ್ಟಾಕ್ ಬಂದರೆ ಮಾತ್ರ ವಿತರಣೆ ಮಾಡಲಾಗುತ್ತದೆ. ದರವನ್ನು ಕಂಪನಿಯೇ ನಿಗದಿಪಡಿಸುತ್ತದೆ; ಆಟೋಮಿಷನ್ ಯಂತ್ರಗಳ ಮೂಲಕ ಸ್ವಯಂಚಾಲಿತವಾಗಿ ಬದಲಾವಣೆ ಆಗುತ್ತದೆ” ಎಂದು ಹೇಳಿದ್ದಾರೆ.

ಇತ್ತೀಚಗೆ ಉಡುಪಿಯಲ್ಲಿ ಗೃಹ ಬಳಕೆ ಸೇರಿದಂತೆ ಮತ್ತಿತರ ಅನಿಲ ವಿತರಣೆ ಕುರಿತ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಮಾತನಾಡಿ, ವಾಹನಕ್ಕೆ ಬಳಕೆ ಮಾಡುವ ಎಲ್ ಪಿ ಜಿ ಹಾಗೂ ಸಿ ಎನ್ ಜಿ ಅನಿಲಗಳನ್ನು ಆಯಿಲ್ ಕಾರ್ಪೋರೇಶನ್ ಸಂಸ್ಥೆಗಳು ನಿಗಧಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ನಿಗಧಿಪಡಿಸಿರುವ ಮೊತ್ತವನ್ನು ಹಾಗೂ ದಾಸ್ತನನ್ನು ತಮ್ಮ ವಿತರಣಾ ಕೇಂದ್ರದಲ್ಲಿ ಜನಸಾಮಾನ್ಯರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು, ಒಂದೊಮ್ಮೆ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂಥವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಅದರ ಜೊತೆಗೆ ಗೃಹ ಬಳಕೆ ಸಿಲಿಂಡರ್ ಗಳನ್ನು ಇತರೆ ಉದ್ದೇಶಕ್ಕೆ ಬಳಸದಂತೆ ನೋಡಿಕೊಳ್ಳಬೇಕು ಒಂದೊಮ್ಮೆ ಇತರೆ ಉದ್ದೇಶಕ್ಕೆ ಬಳಸಿದಲ್ಲಿ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ದೂರದ ಉಡುಪಿ ಜಿಲ್ಲೆಗೂ ತಲುಪಿದ್ದು, ಆಟೋ ಚಾಲಕರ ಜೀವನೋಪಾಯಕ್ಕೆ ನೇರ ಹೊಡೆತ ನೀಡಿದೆ. ಗ್ಯಾಸ್ ಅಭಾವ ಹಾಗೂ ದರ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚಾಲಕರು ಒತ್ತಾಯಿಸಿದ್ದಾರೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




