ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.

ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಪ್ರಮುಖ ಆಕರ್ಷಣೆಯಾಗಿ ಯಶ್‌ಪಾಲ್ ಸುವರ್ಣರನ್ನು ರಾವಣನ ರೂಪದಲ್ಲಿ ಬಿಂಬಿಸಿದ ಕಟೌಟ್ ಗಮನ ಸೆಳೆಯಿತು. ಚಡ್ಡಿ ಧರಿಸಿರುವ ಯಶ್‌ಪಾಲ್ ಸುವರ್ಣ ಅವರ ಕೈಗಳಲ್ಲಿ ಮದ್ಯದ ಬಾಟಲಿ, ಐಸ್‌ಕ್ಯಾಂಡಿ, ಮೊಬೈಲ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕೊಲೇಟ್ ಹಾಗೂ ಚೊಂಬುಗಳನ್ನು ಹಿಡಿದಿರುವಂತೆ ಚಿತ್ರಿಸಲಾಗಿತ್ತು.

ಬಳಿಕ ಪ್ರತಿಭಟನಾಕಾರರು ಕಟೌಟ್‌ಗೆ ಮೊಟ್ಟೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ರಾವಣನ ರೂಪದಲ್ಲಿ ಬಿಂಬಿಸಲಾದ ಯಶ್‌ಪಾಲ್ ಸುವರ್ಣರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ನಿಕೇತ್‌ರಾಜ್ ಮೌರ್ಯ, ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಅವರು ಪ್ರಜಾಪ್ರಭುತ್ವ, ಸತ್ಯ, ನ್ಯಾಯ ಹಾಗೂ ದೇಶಪ್ರೇಮದ ಧ್ವನಿಯಾಗಿದ್ದಾರೆ ಎಂದು ಹೇಳಿದರು. “ಗಾಂಧಿಯನ್ನು ಕಂಡು ಗೋಡ್ಸೆಗೆ ಆಗಿದ್ದ ಭಯ ಇಂದು ಬಿಜೆಪಿಗೆ ಆಗುತ್ತಿದೆ. ವಿದ್ಯಾರ್ಥಿ ಚಳವಳಿಯನ್ನೂ ಕಾಂಗ್ರೆಸ್‌ನನ್ನೂ ಕಂಡು ಬಿಜೆಪಿ ಬೆಚ್ಚಿಬಿದ್ದಿದೆ” ಎಂದು ಟೀಕಿಸಿದರು.
“2014ರಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿತ್ತು. ಆದರೆ ಯುವಜನತೆ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದು, 2029ರ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸುಧೀರ್ ಕುಮಾರ್ ಮರೋಳಿ ಮಾತನಾಡಿ, “ಮುಂದಿನ ಚುನಾವಣೆಯಲ್ಲಿ ಟಿಕೆಟ್ ಉಳಿಸಿಕೊಳ್ಳುವ ಉದ್ದೇಶದಿಂದ ಯಶ್‌ಪಾಲ್ ಸುವರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರ ದೇಹಭಾಷೆ ಹಾಗೂ ಮಾತಿನ ಶೈಲಿಯೇ ಗೂಂಡಾಗಿರಿಯ ಪ್ರತೀಕವಾಗಿದೆ” ಎಂದು ಆರೋಪಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದ್ವೇಷ ಭಾಷಣ ಮಾಡಿದ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಹಲವು ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಿಕೇತ್‌ರಾಜ್ ಮೌರ್ಯ, ಅಶೋಕ್ ಕುಮಾರ್ ಕೊಡವೂರು, ಗೋಪಾಲ್ ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ಉದಯಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ್ ಕಾಂಚನ್, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಶರ್ಪುದ್ದೀನ್ ಶೇಖ್, ಇಸ್ಮಾಯಿಲ್ ಆತ್ರಾಡಿ, ಶಬ್ಬೀರ್ ಉಡುಪಿ, ಅಝೀಝ್ ಹೆಜಮಾಡಿ, ವರೋನಿಕಾ ಕರ್ನೆಲಿಯೋ, ರಾಘವೇಂದ್ರ ಶೆಟ್ಟಿ ಕರ್ಜೆ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.








