ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಮಹಿಳಾ ಸ್ನೇಹಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಮಣಿಪಾಲದಲ್ಲಿರುವ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಈ ದಿನ.ಕಾಮ್ ಜೊತೆ ಮಾತನಾಡಿದ ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಮಹಿಳೆಯರು ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ಕುರಿತು ವರದಿಗಳು ಬಂದಿದ್ದು, ಪರಿಷ್ಕರಣೆ ಪ್ರಕ್ರಿಯೆಯು ಒಳಗೊಳ್ಳುವಿಕೆಯ ಬದಲಾಗಿ ಹೊರತಳ್ಳುವಿಕೆಯ ಸಾಧನವಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಹೆಸರಿನ ಇನಿಷಿಯಲ್, ಕಾಗುಣಿತದ ವ್ಯತ್ಯಾಸ, ಲಿಂಗ ಸೂಚಕದಲ್ಲಿನ ತಪ್ಪುಗಳು, ಬಾಲ್ಯ ವಿವಾಹ, ವಲಸೆ ಜೀವನ ಹಾಗೂ ದಾಖಲೆಗಳ ಕೊರತೆ ಮುಂತಾದ ಕಾರಣಗಳಿಂದ ಮಹಿಳೆಯರು ಅನಗತ್ಯವಾಗಿ ಅನುಮಾನಾಸ್ಪದ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದರು.

ಮಹಿಳೆಯರು, ಅಂತರ್ಜಾತಿ ಹಾಗೂ ಅಂತರ್ಧರ್ಮೀಯ ವಿವಾಹಿತರು, ಟ್ರಾನ್ಸ್‌ಜೆಂಡರ್ ಸಮುದಾಯದವರು ಸೇರಿದಂತೆ ಎಲ್ಲ ಅರ್ಹ ಮತದಾರರು ಯಾವುದೇ ತೊಂದರೆ ಇಲ್ಲದೆ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ವಾಸಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬ ರಿಜಿಸ್ಟರ್ ದಾಖಲೆಗಳಂತಹ ಅಗತ್ಯ ದಾಖಲಾತಿಗಳನ್ನು ಪಡೆಯಲು ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮನವಿಯಲ್ಲಿ ಅಸಂಗತ ವಿವರಗಳು ಹಾಗೂ ತಾರ್ಕಿಕ ವ್ಯತ್ಯಾಸಗಳ ಹೆಸರಿನಲ್ಲಿ ಮತದಾರರನ್ನು ಹೊರಗಿಡಬಾರದು, ಬಾಲ್ಯ ವಿವಾಹಗಳ ಹಿನ್ನೆಲೆಯಲ್ಲಿ 15-45 ವರ್ಷದ ಮಾನದಂಡಗಳನ್ನು ಕಡ್ಡಾಯವಾಗಿ ಅನ್ವಯಿಸಬಾರದು, ವಲಸಿಗರ ಹಕ್ಕುಗಳನ್ನು ರಕ್ಷಿಸಬೇಕು, ಧರ್ಮ-ಜಾತಿ ಆಧಾರಿತ ಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡಬಾರದು ಹಾಗೂ ಚುನಾವಣಾ ಕರ್ತವ್ಯದಲ್ಲಿರುವ ಬಿ.ಎಲ್.ಓ.ಗಳ ಮೇಲೆ ಅನಗತ್ಯ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಕುಂದಾಪುರದ ಮುಖಂಡೆ ಬಲ್ಕೀಸ್, ಕಾರ್ಕಳದ ಮುಖಂಡೆ ಸುನೀತಾ ಶೆಟ್ಟಿ, ಬೈಂದೂರಿನ ಮುಖಂಡೆಯರಾದ ಶೋಭಾ ಹಾಗೂ ನಾಗರತ್ನ ನಾಡ, ಉಡುಪಿ ಮುಖಂಡೆ ನಳಿನಿ ಎಸ್. ಉಪಸ್ಥಿತರಿದ್ದರು.







