ಬ್ಯಾರಿ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸಲು ಸಮಾಜದ ಎಲ್ಲ ವರ್ಗಗಳು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು. ಟಿ. ಖಾದರ್ ಕರೆ ನೀಡಿದರು.
ಮಡಿಕೇರಿ ನಗರದ ಕಾವೇರಿ ಹಾಲ್ನಲ್ಲಿ ಮಂಗಳವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದರು. ಈ ನಿಟ್ಟಿನಲ್ಲಿ ಸೂಕ್ತ ಜಾಗವನ್ನು ಗುರುತಿಸಲು ಸ್ಥಳೀಯ ಮುಖಂಡರು ಮುಂದಾಗಬೇಕು ಎಂದು ಸೂಚಿಸಿದರು. ಸ್ಥಳೀಯ ಶಾಸಕರಾದ ಡಾ. ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಸಹಕಾರದೊಂದಿಗೆ ಈ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾಹಿತ್ಯ ಸಮ್ಮೇಳನಗಳು ಭಾಷೆಯ ಬೆಳವಣಿಗೆಗೆ ಮಾತ್ರವಲ್ಲ, ಚಿಂತನ-ಮಂಥನಕ್ಕೆ ವೇದಿಕೆಯಾಗುತ್ತವೆ. ಸಮಾಜದ ಅಭಿವೃದ್ಧಿ, ಯುವಜನರಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ಇತಿಹಾಸದ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಯುವಕರು ಪುಸ್ತಕ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವುದು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಸಹೋದರತ್ವ, ಸಹಭಾಗಿತ್ವ ಹಾಗೂ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯವಾಗಿದ್ದು, ಎಲ್ಲ ಭಾಷೆಗಳನ್ನೂ ಪ್ರೀತಿಸಿ ಕಲಿಯುವ ಮನೋಭಾವ ಬೆಳೆಸಬೇಕು. ವಿದ್ಯಾರ್ಥಿ ಜೀವನದಲ್ಲೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಬಡತನ ಅಡ್ಡಿಯಾಗಬಾರದು; ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಬಿ.ಎ. ಶಂಶುದ್ದೀನ್ ಮಾತನಾಡಿ, “ಶಿಕ್ಷಣಕ್ಕೆ ಒತ್ತು ನೀಡಿದ ಬಳಿಕ ಬ್ಯಾರಿ ಸಮುದಾಯದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. ಒಮ್ಮೆ ಶಿಕ್ಷಣದಲ್ಲಿ ಹಿಂದುಳಿದಿದ್ದ ಸಮುದಾಯದ ಮಕ್ಕಳು ಇಂದು ವೈದ್ಯರು, ಎಂಜಿನಿಯರ್ಗಳು, ಶಿಕ್ಷಕರು, ವಕೀಲರು ಹಾಗೂ ಸರ್ಕಾರಿ ಸೇವೆಗಳಲ್ಲಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಹಿರಿಯ ಸಾಹಿತಿ ಮತ್ತು ಚಿಂತಕ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, “ಬ್ಯಾರಿ ಭಾಷೆ ಮತ್ತು ಅದರ ಸಾಂಸ್ಕೃತಿಕ ವೈಶಿಷ್ಟ್ಯತೆ ಕರ್ನಾಟಕದ ಬಹುಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ರಾಜ್ಯದಲ್ಲಿ ವಿವಿಧ ಭಾಷೆಗಳು, ಉಪಭಾಷೆಗಳು ಮತ್ತು ಸಂಸ್ಕೃತಿಗಳಿಗೆ ಗೌರವ ನೀಡುವ ಪರಂಪರೆ ಇರುವುದೇ ಕರ್ನಾಟಕದ ವಿಶೇಷತೆ” ಎಂದು ಹೇಳಿದರು.
ಕಾರ್ಯಕ್ರಮದ ಲೈವ್ ವೀಕ್ಷಿಸಿ:https://www.youtube.com/live/5uOvzWnGCp0?si=jhe6QYPf19Ak2l01

ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಸಮ್ಮೇಳನಾಧ್ಯಕ್ಷ ಬಿ.ಎ. ಶಂಶುದ್ದೀನ್ ಅವರನ್ನು ಸನ್ಮಾನಿಸಲಾಯಿತು. ನಗರದ ಕ್ರೆಸೆಂಟ್ ಶಾಲೆಯಿಂದ ಕಾವೇರಿ ಹಾಲ್ವರೆಗೆ ಮೆರವಣಿಗೆ ನಡೆಯಿತು. ಬಳಿಕ ಕವಿಗೋಷ್ಠಿ, ಚರ್ಚಾ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಗಮನ ಸೆಳೆದವು.
ಈ ವಿಶೇಷ ಸುದ್ದಿ ಓದಿದ್ದೀರಾ? ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ. ಜಿ. ಅನಂತಶಯನ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್. ಯು. ಹೆಚ್, ಟಿ.ಎಂ. ಶಾಹಿದ್ ತೆಕ್ಕಿಲ್, ಮಹೇಶ್ ನಾಚಯ್ಯ, ಬಿ. ಹಸನಬ್ಬ, ಎಂ.ಬಿ. ನಾಸಿರ್ ಅಹಮ್ಮದ್, ಅಮೀನ್ ಮೋಸಿನ್, ಎಂ.ಎ. ಮುಸ್ತಫಾ, ಬಶೀರ್ ಅಹಮ್ಮದ್, ಮಹಮ್ಮದ್ ಯಾಕೂಬ್, ಅಬ್ದುಲ್ಲಾ, ಕೆ. ಮಹಮ್ಮದ್, ತಾಜುದ್ದಿನ್ ಅಮ್ಮುಂಜೆ, ಅತ್ತೂರು ಚೆಯ್ಯಬ್ಬ, ಹಮೀದ್ ಹಸನ್ ಮಾಡೂರು, ಯು.ಹೆಚ್. ಖಾಲಿದ್ ಉಜಿರೆ ಸೇರಿದಂತೆ ಅನೇಕ ಗಣ್ಯರು ಇದ್ದರು.





