ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಟ್ಕಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಕೊನೆಯ ಕ್ಷಣದಲ್ಲಿ ಹುಸಿಯಾಗಿದೆ. ಅಂತಿಮವಾಗಿ ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಈ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯಲಿಲ್ಲ.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಕಾಂಗ್ರೆಸ್ ವಲಯದಲ್ಲಿ ವಿವಿಧ ಹೆಸರುಗಳು ಚರ್ಚೆಯಾಗುತ್ತಿದ್ದವು. ಅವುಗಳಲ್ಲಿ ಮಂಕಾಳು ವೈದ್ಯ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಬದಲಾವಣೆ ನಡೆದ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ದೊರೆಯಲಿಲ್ಲ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಭಾರೀ ಮಳೆಗೆ ನಗರ ಜಲಾವೃತ; ಕೋಟೆಕೆರೆ ಉಕ್ಕಿ ಹರಿದು ಜನಜೀವನ ಅಸ್ತವ್ಯಸ್ತ
ಉತ್ತರ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ, ಮಂಕಾಳು ವೈದ್ಯ ಹಾಗೂ ಸತೀಶ್ ಸೈಲ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಂತಿಮ ಹಂತದಲ್ಲಿ ದೇಶಪಾಂಡೆ ಮತ್ತು ಮಂಕಾಳು ವೈದ್ಯ ಅವರ ಹೆಸರುಗಳು ಹೆಚ್ಚು ಚರ್ಚೆಯಲ್ಲಿದ್ದವು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಮೀನುಗಾರ ಸಮುದಾಯದ ಪ್ರತಿನಿಧಿಯಾಗಿ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿ ಮೂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬದಲಾವಣೆಯೊಂದಿಗೆ ದಾವಣಗೆರೆ ಉತ್ತರ ಕ್ಷೇತ್ರದ ಹಿರಿಯ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಈ ಬೆಳವಣಿಗೆಯಿಂದ ಮಂಕಾಳು ವೈದ್ಯ ಅವರ ಬೆಂಬಲಿಗರಲ್ಲಿ ನಿರಾಸೆ ಮನೆ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾತಿನಿಧ್ಯ ಸಿಗದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಪ್ರಕಟವಾಗುತ್ತಿದ್ದಂತೆಯೇ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಗೆ ತೆರೆ ಬಿದ್ದಿದೆ.




