ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಮಂದಿ ಪೈಕಿ ನಿನ್ನೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ.
ಎನ್‌ಡಿಆರ್‌ಎಫ್, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್ ನಾಯ್ಕ್ ಕೂಡ ನೀರುಪಾಲಾಗಿದ್ದಾರೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೆಶ್, ಬಂಡೆ ಮೇಲೆ ಕಪ್ಪು ಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಿನಲ್ಲಿ ಮುಳುಗುತ್ತಿದ್ದಿದ್ದು ಕಂಡ ಕೂಡಲೇ ಆಕೆಯ ರಕ್ಷಣೆಗೆಂದು ಅವರೂ ಕೂಡ ನೀರಿಗೆ ಹಾರಿದ್ದರು. ತಾಯಿ ದಪ್ಪ ಇದ್ದಿದ್ದರಿಂದ ಆಕೆಯನ್ನು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ.
ತಾಯಿಯನ್ನು ಬದುಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ ನೀರಿನಿಂದ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ಕೂಡ ಅಚಾನಕ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೀರುಪಾಲದವರ ಪೈಕಿ ಒಂದೊಂದು ಕುಟುಂಬಗಳ ಕಥೆಯೂ ಮನಕಲಕುವಂತಿದೆ. ಅವಘಡದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರುವುದರಿಂದ ಮಕ್ಕಳಿಗೆ ದಿಕ್ಕೇ ತೋಚದಂತಾಗಿದೆ.
ಒಂದು ಕ್ಷಣದ ಅವಘಡವು ಒಂದು ಕುಟುಂಬವನ್ನು ಸಂಪೂರ್ಣವಾಗಿ ನಾಶಗೊಳಿಸಬಲ್ಲುದು ಎಂಬುದನ್ನು ಈ ದುರಂತ ಮತ್ತೊಮ್ಮೆ ತೋರಿಸಿದೆ. ನೀರಿನಲ್ಲಿ ಜೀವನ ಸಾಗಿಸುತ್ತಿದ್ದ ಈ ಕುಟುಂಬಗಳು, ತಮ್ಮ ದೈನಂದಿನ ಹೋರಾಟದಲ್ಲಿ ಉಳಿವಿಗಾಗಿ ಹೆಣಗಾಡುತ್ತ, ಕೊನೆಗೆ ಆ ನೀರಿಗೆ ತಮ್ಮನ್ನೇ ಅರ್ಪಿಸಬೇಕಾಗಿದೆ.
ಇದನ್ನೂ ಓದಿದ್ದೀರಾ? ರಾಯಚೂರು | ಬೀದಿ ನಾಯಿಗಳ ದಾಳಿ; ಮೂವರು ಮಕ್ಕಳಿಗೆ ಗಾಯ
ತಂದೆ-ತಾಯಿ ಇಬ್ಬರನ್ನೂ ಒಂದೇ ದಿನ ಕಳೆದುಕೊಂಡ ದರ್ಶನ್ ಮತ್ತು ಕೀರ್ತನಾ ಮತ್ತು ತಂದೆಯ ನಂತರ ಅಮ್ಮನನ್ನೂ ಕಳೆದುಕೊಂಡ ನಾಲ್ವರು ಮಕ್ಕಳು ಇವರೆಲ್ಲರ ಕಣ್ಣಲ್ಲಿ ಈಗ ಭವಿಷ್ಯದ ಬಗ್ಗೆ ಭಯವಿದೆ, ಆಶಾಕಿರಣವಿದೆ. ಅಲ್ಲದೆ ಅಪಾರ ಒಬ್ಬಂಟಿತನದ ಹಿಂಜರಿಕೆಯಿದೆ. ಶಿಕ್ಷಣದ ಮಧ್ಯದಲ್ಲೇ ಜೀವನದ ಭಾರವನ್ನು ಹೊರಬೇಕಾದ ಈ ಮಕ್ಕಳ ಮುಂದೆ ಇದು ಕೇವಲ ದುರಂತವಲ್ಲ, ಒಂದು ದೊಡ್ಡ ಸವಾಲು.
ಸಮಾಜವಾಗಿ ನಾವು ಇನ್ನೂ ಎಷ್ಟು ಜವಾಬ್ದಾರಿಯುತರಾಗಬೇಕಿದೆ ಎಂಬುದನ್ನು ಈ ದುರಂತವು ನಮಗೆ ನೆನಪಿಸುತ್ತದೆ. ಸರ್ಕಾರಿ ಸಹಾಯ, ಸ್ಥಳೀಯ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಹೃದಯಿ ವ್ಯಕ್ತಿಗಳ ಬೆಂಬಲವಿಲ್ಲದಿದ್ದರೆ ಈ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುವ ಸಾಧ್ಯತೆ ಇದೆ. ಎಲ್ಲರ ಸಹಾಯ, ಸಹಾನುಭೂತಿ ಮತ್ತು ಜವಾಬ್ದಾರಿಯ ಅಗತ್ಯವಿದೆ.




