ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ದಿಬ್ಬದಹಳ್ಳಿ, ಹರವದಿ, ಗೆದ್ದಲಗಟ್ಟೆ ಗ್ರಾಮದ ನಿವಾಸಿಗಳಿಗೆ ನರಸಿಂಹಗಿರಿ ನ್ಯಾಯಬೆಲೆ ಅಂಗಡಿ ಪಡಿತರ ಅಕ್ಕಿ ವಿತರಣೆ ಮಾಡಿದ್ದು, ಗ್ರಾಮಸ್ಥರಲ್ಲಿ ನಿರಾಳತೆ ಉಂಟಾಗಿದೆ.
ಜರ್ಮಲಿ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂರು ತಿಂಗಳಿನಿಂದ ಸರಿಯಾಗಿ ಪಡಿತರ ವಿತರಣೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೂಡ್ಲಿಗಿ | ಪಡಿತರ ಗೋಲ್‌ಮಾಲ್: 3 ತಿಂಗಳಿಂದ ಸಿಗದ ಅನ್ನಭಾಗ್ಯ, 200 ಕ್ವಿಂಟಲ್ ಅಕ್ಕಿಗೆ ಕನ್ನ? ಎಂಬ ಶೀರ್ಷಿಕೆಯಡಿ ಈ ದಿನ.ಕಾಮ್ ಮೇ 2ರಂದು ವರದಿ ಪ್ರಕಟಿಸಿತ್ತು. ಬಳಿಕ ಮೇ 7ರಂದು ಜರ್ಮಲಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಗೊಳಿಸಿದ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು, ಜರ್ಮಲಿ ಗ್ರಾಮದಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿರುವ ನರಸಿಂಹಗಿರಿಯ ನ್ಯಾಯಬೆಲೆ ಅಂಗಡಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದರು.
ಈ ದಿನ.ಕಾಮ್‌ನಲ್ಲಿ ಈ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಹರವದಿ ಗ್ರಾಮಸ್ಥರಿಗೆ ಎರಡು ತಿಂಗಳ ಪಡಿತರ ಅಕ್ಕಿಯನ್ನು ಒಂದೇ ಬಾರಿಗೆ ವಿತರಣೆ ಮಾಡಿದ್ದಾರೆ. ಪಡಿತರ ಚೀಟಿಯಲ್ಲಿ ಮೇ ಮತ್ತು ಜೂನ್ ತಿಂಗಳ ರೇಷನ್ ಎಂದು ಮಾರ್ಕ್ ಮಾಡಿದ್ದಾರೆ.
“ಬಾಕಿ ಉಳಿದಿರುವ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ಅಕ್ಕಿಯನ್ನು ವಿತರಣೆ ಮಾಡಿಲ್ಲ. ಆ ರೇಷನ್ ಕೊಡುವರೇ ಇಲ್ಲವೇ? ಸರ್ಕಾರ ಕೊಟ್ಟ ಆ ಮೂರು ತಿಂಗಳ ಅನ್ನಭಾಗ್ಯದ ಅಕ್ಕಿ ಯಾರ ಪಾಲಾಯಿತು” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಹರವದಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಮಾತನಾಡಿ, “ನರಸಿಂಹಗಿರಿ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ನಮ್ಮೂರಿಗೆ(ಹರವದಿ) ಬಂದು ರೇಷನ್ ವಿತರಣೆ ಮಾಡಿದ್ದಾರೆ. ಆದರೆ ಬಾಕಿ ಇರುವ ಮೂರು ತಿಂಗಳ ಪಡಿತರ ಯಾವಾಗ ಕೊಡ್ತೀರಿರೆಂದು ಕೇಳಿದರೆ, ಅದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಮುಗಿದ ಮೇಲೆ ಬಾಕಿ ಪಡಿತರ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
ಜರ್ಮಲಿ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಿಬ್ಬದಹಳ್ಳಿ ನಿವಾಸಿ ರಂಗಪ್ಪ ಮಾತನಾಡಿ, “ಮೇ, ಜೂನ್ ತಿಂಗಳ ಪಡಿತರ ಮಾತ್ರ ಕೊಟ್ಟಿದ್ದಾರೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ರೇಷನ್ ಯಾಕೆ ಕೊಡ್ತಿಲ್ಲವೆಂದು ನ್ಯಾಯಬೆಲೆ ಅಂಗಡಿ ಸಿಬ್ಬಂದಿಯನ್ನು ಕೇಳಿದರೆ, ʼಅಧಿಕಾರಿಗಳನ್ನು ಕೇಳಿʼ ಎನ್ನುತ್ತಿದ್ದಾರೆ” ಎಂದು ಹೇಳಿದರು.
ಸದ್ಯ ಹರವದಿ ಗ್ರಾಮಸ್ಥರಿಗೆ ಮೂರು ತಿಂಗಳ ಬಳಿಕ ಅನ್ಯಭಾಗ್ಯದ ಸಿಹಿ ಸಿಕ್ಕಿದೆ. ಆದರೆ ಅಧಿಕಾರಿಗಳು ಇನ್ನುಳಿದ ಮೂರು ತಿಂಗಳ ಅಕ್ಕಿ ಯಾವಾಗ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಜರ್ಮಲಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ತಿಂಗಳಿಂದ ಪಡಿತರ ವಿತರಣೆಯಲ್ಲಿ ಉಂಟಾದ ಗಣನೀಯ ವ್ಯತ್ಯಯ ಮತ್ತು ಅಕ್ಕಿ ಸರಬರಾಜಿನಲ್ಲಿ ಕಂಡುಬಂದ ಗೋಲ್‌ಮಾಲ್ ಸಾರ್ವಜನಿಕ ವ್ಯವಸ್ಥೆಯಲ್ಲಿ ಇನ್ನೂ ಇರುವ ದೌರ್ಜನ್ಯಗಳನ್ನು ಬಯಲು ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ತ್ವರಿತ ಕ್ರಮ ಕೈಗೊಂಡು ಅಂಗಡಿ ಪರವಾನಗಿ ರದ್ದುಗೊಳಿಸಿ, ಸಮೀಪದ ನರಸಿಂಹಗಿರಿ ಅಂಗಡಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದು ಸಕಾಲಿಕ ನಡೆಯಾಗಿದೆ.
ಆದರೆ, ಇದು ಒಂದು ವ್ಯಕ್ತಿಗತ ಸಮಸ್ಯೆಯಲ್ಲ, ವ್ಯವಸ್ಥೆಯ ವೈಫಲ್ಯದ ಲಕ್ಷಣವಾಗಿದೆ. ಅನ್ನಭಾಗ್ಯ ಯೋಜನೆಯಡಿ ಸರ್ಕಾರಿ ಸಹಾಯವನ್ನು ಸರಿಯಾಗಿ ಪಡೆಯುವ ಹಕ್ಕು ಪ್ರತಿ ಪಡಿತರ ಚೀಟಿದಾರರದ್ದಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಮಾಡಲು ಕೇವಲ ಅಂಗಡಿ ಪರವಾನಗಿ ರದ್ದು ಮಾತ್ರ ಸಾಲದು. ಬದಲಿಗೆ ಅಗತ್ತಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಜಿಲ್ಲಾ ಮಟ್ಟದಲ್ಲಿ ನಿಯಮಿತ ದಿಢೀರ್ ಪರಿಶೀಲನೆ ಮತ್ತು ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಬಲಪಡಿಸಬೇಕು. ತಿಂಗಳಿಗೊಮ್ಮೆ ಪಡಿತರ ಧಾನ್ಯಗಳ ಲೆಕ್ಕಪರಿಶೋಧನೆ ಮಾಡಬೇಕು. ದೂರುಗಳಿಗೆ ತ್ವರಿತ ಪ್ರತಿಕ್ರಿಯೆ ಮತ್ತು ದೋಷಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರಿಗೆ ಜಾಗೃತಿ ಮತ್ತು ದೂರವಾಣಿ/ಆನ್‌ಲೈನ್ ದೂರು ವ್ಯವಸ್ಥೆಯ ಪರಿಣಾಮಕಾರಿ ಬಳಕೆಯಾಗುವುವಂತೆ ಗಮನಹರಿಸಿದರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು.
ಇದನ್ನೂ ಓದಿದ್ದೀರಾ? ನೋಟಿಸ್ ನೀಡಿದರೂ ಹೋರಾಟ ನಿಲ್ಲುವುದಿಲ್ಲ: ಭೂಮಾಪಕರ ಎಚ್ಚರಿಕೆ
ಈ ಘಟನೆಯು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಮಹತ್ವವನ್ನು ಎತ್ತಿ ತೋರಿಸಿದೆ. ಜನರ ಮೂಲಭೂತ ಅಗತ್ಯಗಳಾದ ಅಕ್ಕಿಯ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೂ ಅವಕಾಶವಿರಬಾರದು. ಇದಕ್ಕೆ ಜಿಲ್ಲಾಡಳಿತದ ನಿರಂತರ ಗಮನ ಮತ್ತು ಕಠಿಣ ನಿರ್ವಹಣೆಯ ಅಗತ್ಯವಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



