ವಿಜಯಪುರ | ಬೃಹತ್ ಬಂಜಾರಾ ಸ್ವಾಭಿಮಾನಿ ಸಮಾವೇಶ; ಕಾಂಗ್ರೆಸ್‌‌ಗೆ ಬೆಂಬಲ ಸೂಚಿಸಿದ ಲಂಬಾಣಿ ಸಮುದಾಯ

Date:

ಬಂಜಾರಾ ಸಮುದಾಯದ ಒಗ್ಗಟ್ಟು ನೋಡಿ ಸಂತೋಷವಾಗಿದ್ದು, ನಿಮ್ಮ ಬದುಕನ್ನು ಕಟ್ಟಿಕೊಡುವ ಕೆಲಸ ನಾವು ಮಾಡಿದ್ದೇವೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ ನಗರದಲ್ಲಿ ಗುರುವಾರ (ಮೇ.2) ನಡೆದ ಬಂಜಾರಾ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿ, ನೀವು ಶ್ರಮ ಜೀವಿಗಳು, ಗಟ್ಟಿಗರು. ಬಸವಣ್ಣನವರ ಕಾಯಕ ಪರಂಪರೆಯಂತೆ ಇದ್ದೀರಿ. ನಿಮ್ಮ ಸಂಸ್ಕೃತಿ ಬಿಟ್ಟಿಲ್ಲ ಎಂದರು.

ನಿಮಗೆ ಮೀಸಲಾತಿ ಕೊಡಿಸುವಲ್ಲಿ ಇಂದಿರಾಗಾಂಧಿ, ದೇವರಾಜ ಅರಸು ಅವರ ಶ್ರಮ ಕಾರಣ. ಇತ್ತೀಚೆಗೆ ತಾಂಡಾ ಅಭಿವೃದ್ಧಿ ಯೋಜನೆಗಳಿಂದ ನಿಮ್ಮ ಏಳಿಗೆಗೆ ಯತ್ನಿಸಿದ್ದೇವೆ. ಸಿದ್ದರಾಮಯ್ಯರು ಇಲ್ಲಿನ ನಿಡೋಣಿಗೆ ಬಂದಾಗ ಅಲ್ಲೇ ಸೇವಾಲಾಲರ ಜಯಂತಿ ಘೋಷಣೆ ಮಾಡಲಾಗಿತ್ತು. ಹಾಗೆಯೇ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಬದಲಾಯಿಸಿದ್ದು ನಮ್ಮ ಸರ್ಕಾರ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಿಸಲು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಪ್ರಾಮಾಣಿಕವಾಗಿ ಒತ್ತಾಯ ಮಾಡುವುದಾಗಿ ಹೇಳಿದ ಸಚಿವ ಪಾಟೀಲರು, ಉಳಿದ ಸ್ಥಾನಮಾನಗಳಿಗೂ ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ನಿಮ್ಮ ಸೌಖ್ಯವನ್ನು ಕಾಪಾಡಲಾಗಿದೆ. ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಂತರ ಬಂಜಾರಾ ಸಮಾಜಕ್ಕೆ ಬಹಳಷ್ಟು ಅನುಕೂಲವಾಗಿದೆ. ಪಡಿತರ ಕಾರ್ಡಿನಿಂದ ಹಿಡಿದು ಒಕ್ಕಲುತನ ಮಾಡಲು ಜಮೀನನ್ನು ಕೂಡ ನೀಡಲಾಗಿದೆ. ಅಭಿವೃದ್ಧಿ ಪರವಿರುವ ಪಕ್ಷಕ್ಕೆ ಮತ ನೀಡಿ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಭವಿಷ್ಯ ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದರು.

ಮಾಜಿ ಜಿಪಂ ಸದಸ್ಯ ಅರ್ಜುನ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಅವರಿಂದ ನಾವು ಮೀಸಲಾತಿ ಪಡೆದು ಅನುಕೂಲವಾಗಿದೆ. ನಾವು ಸುಶಿಕ್ಷತರಾಗಿ ಬದುಕುತ್ತಿದ್ದೇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬಂಜಾರಾ ಸಮುದಾಯವಿದೆ. ಇಲ್ಲಿ ಐದು ಸಾವಿರ ತಾಂಡಾಗಳಿವೆ. ಈ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕಿದೆ ಎಂದರು.

ಎಲ್ಲ ಮತಕ್ಷೇತ್ರದ ಜನ ಇಲ್ಲಿ ಸೇರಿದ್ದೇವೆ. ನಾವು ಯಾರಿಗೆ ಮತ ನೀಡಿದರೆ ಒಳಿತು ಎಂದು ಎಲ್ಲೆಡೆ ಚರ್ಚಿಸಲಾಗಿದೆ. ನಮಗಾಗಿ ಕಾಳಜಿ ವಹಿಸುವ ವ್ಯಕ್ತಿಗೆ ಮತ ನೀಡಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರರು ಯೋಗ್ಯರಿದ್ದಾರೆ. ಇವರು ಗೆದ್ದರೆ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಬಹಳ ಅನುಕೂಲವಾಗಲಿದೆ. ಸಿದ್ದರಾಮಯ್ಯರ ಸರಕಾರ ನಮ್ಮ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ ಎಂದರು.

ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲರು ಸಾವಿರಾರು ಕೋಟಿ ರೂ.ನಲ್ಲಿ  ನೀರಾವರಿ ಕೆಲಸ ಸಾಕಾರಗೊಳಿಸಿದ್ದಾರೆ. ನಮಗೆ ಬೆಲೆ ಬಾಳುವ ಜಮೀನು ನೀಡಿ ನಮ್ಮ ಸಂತರ ಗುಡಿ ಕಟ್ಟಿಸಲು ಸಹಾಯ ಮಾಡಿದ್ದಾರೆ. ಇದಲ್ಲದೇ ಸಮುದಾಯ ಭವನ ಸೇರಿ ಅನೇಕ ಕೆಲಸ ಆಗಲಿವೆ. ರಾಜ್ಯದಲ್ಲಿ ಎಲ್ಲೂ ನಮ್ಮ ಜನಕ್ಕೆ ಇಷ್ಟು ಸಹಾಯ ಸಿಕ್ಕಿಲ್ಲ. ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ಹಾಗಾಗಿ ನಾವು ಆಲಗೂರರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ನೂರಕ್ಕೆ ನೂರರಷ್ಟು ನಮ್ಮ ಬಂಜಾರಾ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡೋಣ. ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ನಮಗೆ ಅವಮಾನ ಮಾಡಿದ್ದಾರೆ. ಅವರಿಗೆ ಪಾಠ ಕಲಿಸಬೇಕು ಎಂದರು.

ಮುಖಂಡ ಬಿ.ಬಿ. ಲಮಾಣಿ ಮಾತನಾಡಿ, ನಾವು ಲಂಬಾಣಿಗರು ಸ್ವಾಭಿಮಾನಿಗಳಿದ್ದೇವೆ. ನಮಗೆ ಅಧಿಕಾರ ಸಿಗಬೇಕಾದರೆ ನಾವು ಸಂಘಟಿತರಾಗಬೇಕು. ನಮಗೆ ಆಗಿರುವ ಅನ್ಯಾಯ ಸರಿಯಾಗಬೇಕು. ನಮಗೆ ಮಂತ್ರಿ, ನಿಗಮ ಸ್ಥಾನ, ರಾಜ್ಯಸಭೆಯಲ್ಲಿ ಆದ್ಯತೆ ಸಿಗಬೇಕು. ನಮಗೆ ಎಂ.ಬಿ.ಪಾಟೀಲರು ಬೆನ್ನೆಲುಬಾಗಿದ್ದಾರೆ. ಅವರು ನಮ್ಮ ಅಳಲಿಗೆ ಸ್ಪಂದಿಸುತ್ತಾರೆ. ಜಿಗಜಿಣಗಿ ಮುತ್ಸದ್ದಿ ರಾಜಕಾರಣಿಯಾಗಿ ತಪ್ಪು ಮಾಡಿದ್ದಾರೆ, ಹಾಗಾಗಿ ನಾವು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಮಾತನಾಡಿ, ಬಂಜಾರಾ ಸಮುದಾಯದ ಜೊತೆ ಯಾವತ್ತೂ ಇರುತ್ತೇನೆ. ಬಿಜೆಪಿಯವರಂತೆ ನಾನು ನಡೆದುಕೊಳ್ಳುವುದಿಲ್ಲ. ನೀವು ದೊಡ್ಡ ಸಮುದಾಯ. ನಿಮ್ಮ ಮತಗಳು ನನಗೆ ಬಂದರೆ ನನ್ನ ಗೆಲುವನ್ನು ತಡೆಯಲು ಜಿಗಜಿಣಗಿಯವರಿಂದ ಸಾಧ್ಯವಿಲ್ಲ. ನಿಮಗೆಲ್ಲ ನಾನು ಋಣಿಯಾಗಿರುವೆ ಎಂದು ಹೇಳಿದರು.

ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಸ್ವಯಂ ಪ್ರೇರಿತರಾಗಿ ನೀವೆಲ್ಲ ನಿಮ್ಮ ಭವಿಷ್ಯಕ್ಕಾಗಿ ಸ್ವಾಭಿಮಾನ ಸಮಾವೇಶ ನಡೆಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಇಂತಹ ಬೆಳವಣಿಗೆ ಸರಿಯಾಗಿದೆ. ನೀವುಗಳು ಯೋಚಿಸಿ, ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಿದ್ದೀರಿ. ಕಾಂಗ್ರೆಸ್ ಜೊತೆಗೆ ಮೊದಲಿಂದ ನಮ್ಮದು ಒಡನಾಟವಿದೆ. ಈ ಲೋಕಸಭೆಗೆ ರಾಜು ಆಲಗೂರರನ್ನು ಆರಿಸಿ ಕಳಿಸುವುದು ಅಗತ್ಯವಿದೆ ಎಂದರು.

ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ. ಇದು ಬಂಜಾರಾ ಸಮುದಾಯ ಮತ್ತು ಬಿಜೆಪಿ ಮಧ್ಯದ ಹೋರಾಟ. ನಾನು ಆರ್‌ಎಸ್‌ಎಸ್‌ನಲ್ಲಿ ಇಪ್ಪತ್ತು ವರ್ಷ ದುಡಿದು ಲೋಕಸಭೆಗೆ ಬಿಜೆಪಿಯಿಂದ ಟಿಕೆಟ್ ಕೇಳಿದ್ದೇ ಅಪರಾಧವಾಯಿತು. ಬಿಜೆಪಿಗೆ ಕೆಳ ಸಮುದಾಯಗಳ ಬಗ್ಗೆ ಬೆಲೆ ಇಲ್ಲ. ಹೀಗಾಗಿ ನಮ್ಮದು ಕಾಂಗ್ರೆಸ್‌‌ಗೆ ಬೆಂಬಲ. ನಮ್ಮ ಮೀಸಲಾತಿಯನ್ನು ಕಸಿಯಲು ಬಿಜೆಪಿ ಹೊರಟಿದೆ. ಇಂದಿರಾಗಾಂಧಿಯಿಂದ ಎಂ.ಬಿ.ಪಾಟೀಲರ ತನಕ ನಮ್ಮ ಹಿತ ಕಾಪಾಡಲಾಗಿದೆ. ಈ ಉಪಕಾರಕ್ಕೆ ನಾವು ಋಣಿಯಾಗಿರಬೇಕು. ಆಲಗೂರರನ್ನು ಗೆಲ್ಲಿಸಿಯೇ ನಾವೆಲ್ಲ ವಿಶ್ರಮಿಸಬೇಕು ಎಂದರು.

ಲೋಕಸಭೆಗೆ ಟಿಕೆಟ್ ಕೇಳಿ ನಂತರ ಕಾಂಗ್ರೆಸ್ ಪಕ್ಷ ಸೇರಿರುವ ಮುಖಂಡ ಬಾಬು ರಾಜೇಂದ್ರ ನಾಯಕ ಮಾತನಾಡಿ, ‘ನಮ್ಮ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಇದನ್ನು ಸ್ವಾಭಿಮಾನಿಗಳಾದ ನಾವು ಎದುರಿಸಿ ನಮ್ಮತನ ಉಳಿಸಿಕೊಳ್ಳಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುವೆ..’ ಎಂದು ಹೇಳುತ್ತ ಭಾವುಕರಾಗಿ ಕಣ್ಣೀರು ಹಾಕಿದ್ದು ಸೇರಿದ್ದ ಲಂಬಾಣಿ ಜನರ ನೋವೂ ಮಡುಗಟ್ಟುವಂತೆ ಮಾಡಿತು.

ಕೌಶಲ್ಯ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ಹಿರಿಯ ಮುಖಂಡ ಡಿ.ಎಲ್. ಚವ್ಹಾಣ, ವಾಮನ್ ಚವ್ಹಾಣ, ರಾಜು ಜಾಧವ, ಮಲ್ಲಿಕಾರ್ಜುನ ನಾಯಕ, ಶ್ರೀದೇವಿ ಉತ್ಲಾಸರ, ಶಂಕರ ಚವ್ಹಾಣ, ಎಂ. ಎಸ್. ನಾಯಕ, ಡಾ.ಗಂಗಾಧರ ಸಂಬಣ್ಣಿ, ಸುರೇಶ ರಾಠೋಡ, ಶೇಖರ ನಾಯಕ, ರವಿ ಜಾಧವ, ರಾಜು ಚವ್ಹಾಣ ಅನೇಕರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...

ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು

ಬೊಲೆರೋ ಟೆಂಪೊಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ...