ಮಠ-ಮಾನ್ಯಗಳ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ನಡೆ-ನುಡಿ ಬೆಳೆದು, ಬಸವಾದಿ ಶರಣರ ದಾಸೋಹ ತತ್ವ ಎಲ್ಲೆಡೆ ನೆಲೆಗೊಳ್ಳುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಅಂಗವಾಗಿ ಹಮ್ಮಿಕೊಂಡಿದ್ದ ‘ತಿರಂಗಾ ಬುತ್ತಿ ಯಾತ್ರೆ’ಯನ್ನು ಮಠದ ಮಹಾದ್ವಾರದಲ್ಲಿ ಸ್ವಾಗತಿಸಿ, ಬಳಿಕ ನಡೆದ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು.
“ಬಬಲೇಶ್ವರ ಮಠದ ಕಾರ್ಯಕ್ರಮದಲ್ಲಿ 12ನೇ ಶತಮಾನವೇ ಮರುಕಳಿಸಿದ ಅನುಭವವಾಗುತ್ತಿದೆ. ತಾಯಂದಿರು ಭಕ್ತಿ, ಶ್ರದ್ಧೆಯಿಂದ ಬುತ್ತಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದೆ. ಬಬಲೇಶ್ವರ ಸೇರಿದಂತೆ ಈ ಭಾಗಕ್ಕೆ ನೀರು ಹರಿಸಿದ ತೃಪ್ತಿ ತಮಗಿದೆ. ಸಮೃದ್ಧ ಬೆಳೆ ಬೆಳೆದು ಜನರು ಸುಖವಾಗಿರುವುದು ಸಂತಸ ತಂದಿದೆ” ಎಂದು ಹೇಳಿದರು.
“ವಿಜಯಪುರ ಜಿಲ್ಲೆ ಹಿಂದೆ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಜಿಲ್ಲೆಯ ಅರ್ಧದಷ್ಟು ಭೂಮಿಗೂ ನೀರಾವರಿ ಸೌಲಭ್ಯ ಇರಲಿಲ್ಲ. ಬಬಲೇಶ್ವರ ಹಾಗೂ ತಿಕೋಟಾ ಭಾಗಕ್ಕೆ ಶಕ್ತಿ ಮೀರಿ ನೀರು ಒದಗಿಸಲಾಗಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಮರಿಸಬೇಕು. ಇಂದು ಬರಗಾಲವಿದ್ದರೂ ಈ ಭಾಗದಲ್ಲಿ ಅದರ ಪರಿಣಾಮ ಕಡಿಮೆಯಾಗಿದೆ. ಕೆರೆ, ಹಳ್ಳಗಳಿಗೂ ನೀರು ಸಿಕ್ಕಿದೆ” ಎಂದರು.
“ನೀರಾವರಿ ಯೋಜನೆಗಳನ್ನು ಪ್ರಾಧಿಕಾರದ ಗೆಜೆಟ್ ನೋಟಿಫಿಕೇಷನ್ಗೂ ಮೊದಲೇ ಸಾಕಾರಗೊಳಿಸಿದ್ದು ಈಗ ಇತಿಹಾಸವಾಗಿದೆ. ಸಿದ್ದೇಶ್ವರ ಶ್ರೀಗಳ ಆಶಯದಂತೆ ವಿಜಯಪುರ ಜಿಲ್ಲೆಗೆ ಅಂಟಿಕೊಂಡಿದ್ದ ‘ಬರದ ನಾಡು’ ಎಂಬ ಹಣೆಪಟ್ಟಿ ಕಳಚಲು ಶ್ರಮಿಸಿದ್ದೇನೆ” ಎಂದು ಹೇಳಿದರು.
“ಸಿದ್ದೇಶ್ವರ ಶ್ರೀಗಳ ನಂತರ ಮಣಕವಾಡಿ ಶ್ರೀಗಳ ಪ್ರವಚನಗಳು ಜನಮಾನಸ ತಲುಪುತ್ತಿವೆ. ಬಸವಾದಿ ಶರಣರ ವಿಚಾರಗಳನ್ನು ಶ್ರೀಗಳು ಎಲ್ಲೆಡೆ ಪಸರಿಸುತ್ತಿದ್ದಾರೆ. ಮಣಕವಾಡಿಯಲ್ಲಿ ಅವರು ಆರಂಭಿಸಿರುವ ಆಧುನಿಕ ಶಾಲೆ ಅವರ ಇಚ್ಛಾಶಕ್ತಿ ಹಾಗೂ ಸಾಹಸಕ್ಕೆ ಸಾಕ್ಷಿಯಾಗಿದೆ” ಎಂದರು.
“ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿ ಹಾಗೂ ಶಾಂತವೀರ ಶ್ರೀಗಳು ಈ ಭಾಗದ ರತ್ನಗಳಾಗಿದ್ದಾರೆ. ಡಾ. ಮಹಾದೇವ ಶಿವಾಚಾರ್ಯರದ್ದು ಮಗುವಿನ ಮನಸ್ಸು. ಮಠ-ಮಾನ್ಯಗಳ ಸೇವೆ ಮತ್ತು ಸಹಕಾರಕ್ಕೆ ತಮ್ಮ ಬೆಂಬಲ ನಿರಂತರವಾಗಿರಲಿದೆ” ಎಂದು ಭರವಸೆ ನೀಡಿದರು.
ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, “ಕಲ್ಯಾಣದ ಶರಣರ ಭಾವ ಇಲ್ಲಿನ ಹೆಣ್ಣುಮಕ್ಕಳಲ್ಲಿ ಕಾಣುತ್ತಿದೆ. ಬಬಲೇಶ್ವರದ ಜನರು ಭಕ್ತಿ ಭಾವದಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ” ಎಂದರು.
ಮಣಕವಾಡದ ಮೃತ್ಯುಂಜಯ ಶ್ರೀಗಳು ಪ್ರವಚನ ನೀಡಿ, “ಗುರು ಪರಂಪರೆಯ ಮಠದಲ್ಲಿ ಶರಣರ ವಿಚಾರಧಾರೆಗಳ ದರ್ಶನ ನಡೆಯುತ್ತಿರುವುದು ಅನನ್ಯ. ಬಬಲೇಶ್ವರದವರು ಯಾವುದೇ ಕಾರ್ಯ ಮಾಡಿದರೂ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಅವರ ಮನಸ್ಸು ವಿಶಾಲವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕನಿಷ್ಠ ವೇತನ ಪರಿಷ್ಕರಣೆ ಜಾರಿಗೆ ಸಿಐಟಿಯು ಒತ್ತಾಯ: ಸಚಿವ ಎಂ ಬಿ ಪಾಟೀಲರಿಗೆ ಮನವಿ
“ಮಣಕವಾಡಿಯಲ್ಲಿ ಆರಂಭಿಸಿದ್ದ ಶಾಲೆಗೆ ಸಚಿವ ಎಂ ಬಿ ಪಾಟೀಲ ಅವರಿಂದ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಸಂಪನ್ಮೂಲಗಳ ಕೊರತೆಯ ನಡುವೆಯೂ ಶಾಲೆ ಇಂದು ಬೃಹತ್ತಾಗಿ ಬೆಳೆದಿದೆ. ಮನುಷ್ಯನ ಸಾಧನೆಗೆ ಇಚ್ಛಾಶಕ್ತಿಯೇ ಮುಖ್ಯ” ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಡಾ. ಮಹಾದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮನಗೂಳಿಯ ಅಭಿನವಸಂಗನಬಸವ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಮೈಸೂರಿನ ನಿರಂಜನ ದೇವರು ಹಾಗೂ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.




