“ನಮ್ಮ ದೇಶ ಸ್ವತಂತ್ರಗೊಂಡು ಎಂಬತ್ತು ವರ್ಷವಾಗಿದೆ. ಈಗಲೂ ಯುವಜನರು ಶಿಕ್ಷಣ, ಉದ್ಯೋಗ, ಆರೋಗ್ಯ ಹಕ್ಕಿಗಾಗಿ ಹಾಗೂ ಘನತೆ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ. ಯುವಜನರು ಒಂದಾಗಬೇಕು ಆಗ ಮಾತ್ರವೇ ಈಆಶಯಗಳು ಈಡೇರಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಹತ್ತಾರು ವರ್ಷಗಳ ಸಾಧನೆ ಶೂನ್ಯವಾಗಿದ್ದು, ಮೋದಿ ಸರಕಾರ ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿದೆ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹರಿಹಾಯ್ದರು.
ಹಾವೇರಿ ನಗರದ ಪರಿವೀಕ್ಷಣಾ ಮಂದಿರದ ಸಭಾಂಗಣದಲ್ಲಿ ಶನಿವಾರ ಉದ್ಯೋಗ – ಆರೋಗ್ಯದ ಹಕ್ಕಿಗಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸೌಹಾರ್ದತೆಗಾಗಿ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಯುವಜನರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಜನರು ಬೇಡಿಕೆಗಳನ್ನು ಪೂರೈಸಲು ವಿಫಲವಾಗಿವೆ. ಧರ್ಮ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣ ಫ್ಯಾಸಿಸ್ಟ್ ವ್ಯವಸ್ಥೆಯನ್ನು ಹೊಂದಿದೆ. ತನ್ನ ಜನವಿರೋಧಿ ನೀತಿಗಳನ್ನು ರೂಪಿಸಲು ಮುಂದಾಗುತ್ತಿದೆ. ಒಂದಲ್ಲ ಒಂದು ಯೋಜನೆಯಿಂದ ಜನರ ಐಕ್ಯತೆ ಒಡೆಯಲು ಯತ್ನಿಸುತ್ತಿದೆ. ಯುವಜನತೆಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರ ಹಿಡಿದು ದಶಕ ಕಳೆದರೂ ಉದ್ಯೋಗ ಸೃಷ್ಟಿಸದೇ ದೇಶದ ಜನತೆಗೆ ದ್ರೋಹವೆಸಗಿದ್ದಾರೆ.

ಒಂದು ಉದ್ಯೋಗಕ್ಕೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಅರ್ಜಿ ಹಾಕುವ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಅಗ್ನಿ ಪಥ ಎಂಬ ಗುತ್ತಿಗೆ ಯೋಜನೆಯನ್ನು ಸೇನಾ ವ್ಯವಸ್ಥೆಯಲ್ಲಿ ಜಾರಿ ಮಾಡಿ ಬಿಜೆಪಿ ಸರಕಾರ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಅದೇ ರೀತಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡದೆ ನೇಮಕಾತಿ ಮಹಾನ್ ಭ್ರಷ್ಟಾಚಾರ ನಡೆಸುತ್ತದೆ” ಎಂದರು.
ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ ಮಾತನಾಡಿ, “ಯುವಜನರ ಒಂದಾಗಿ ಹೋರಾಟ ಮಾಡುವ ಮೂಲಕ ಎಲ್ಲವೂ ಸಾಧ್ಯ ಎಂದು ತೋರಿಸಬೇಕು. ದೇಶದ ಜನತೆ ಯುವಕರ ಮೇಲೆ ಸಾಕಷ್ಟು ಭರವಸೆ ಹೊಂದಿದೆ. ಸಮಾಜದಲ್ಲಿನ ಕೆಲವು ಅಡೆತಡೆಗಳನ್ನು ಮೀರಿ ದೇಶಕ್ಕಾಗಿ ಹಾಗೂ ತಮ್ಮ ಭವಿಷ್ಯಕ್ಕಾಗಿ ಯುವಕ – ಯುವತಿಯರು ಹೊರಗಡೆ ಬರಬೇಕು. ಅನ್ಯಾಯವನ್ನು ಪ್ರಶ್ನೆಸುವಂತಾಗಬೇಕು” ಎಂದರು.
ಅಧ್ಯಕ್ಷತೆ ವಹಿಸಿ ಸಂಚಾಲಕ ನಾರಾಯಣ ಕಾಳೆ ಮಾತನಾಡಿ, “ನಿರುದ್ಯೋಗ ಅನಿಷ್ಟ ವ್ಯವಸ್ಥೆ ವಿರುದ್ಧ ಉದ್ಯೋಗಕ್ಕಾಗಿ ಯುವಜನರ ಸಂಘಟಿತರಾಗಬೇಕು. ಜಿಲ್ಲೆಯಲ್ಲಿ ಸ್ಥಳೀಯ ಉದ್ಯೋಗಗಳು ಸೃಷ್ಟಿಯಾಗಬೇಕು. ನಿರುದ್ಯೋಗವನ್ನು ಹೋಗಲಾಡಿಸಲು ವೃತಿ ಕೌಶಲ್ಯ ಉನ್ನತ ಶಿಕ್ಷಣದ ಅತ್ಯಾವಶ್ಯಕತೆ ಇದೆ. ಜಿಲ್ಲೆಯಲ್ಲಿ ಇರುವ ಎಲ್ಲಾ ಇಲಾಖೆಯ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು” ಎಂದರು.
ಸಮ್ಮೇಳನಕ್ಕೆ ಶುಭಕೋರಿ ಸಿಐಟಿಯು ಜಿಲ್ಲಾ ಸಂಚಾಲಕ ಅಂದಾನೆಪ್ಪ ಹೆಬಸೂರು, ಡಿಎಚ್ಎಸ್ ಮುಖಂಡರು ವೀರಣ್ಣ ಗಡ್ಡಿಯವರ, ಈದಿನ ಮಾಧ್ಯಮದ ಶರಣು ಸಂಗನಾಳ, ಡಿವೈಎಫ್ಐ ಜಿಲ್ಲಾ ಮುಖಂಡ ಖಲಂದರ್ ಅಲ್ಲಿಗೌಡ್ರ, ಪ್ರಾಸ್ತಾವಿಕವಾಗಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು. ತಸ್ಲೀಮಾ ಕೆ.ಸಿ ನಿರೂಪಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ, ಜಿಲ್ಲಾ ಕಾರ್ಯದರ್ಶಿ ಚೈತ್ರಾ ಕೊರವರ, ಸಹ ಕಾರ್ಯದರ್ಶಿ ಶಂಭುಲಿಂಗ ಸವದತ್ತಿ, ಡಿವೈಎಫ್ಐ ಮುಖಂಡ ವಿಠ್ಠಲ ಗೌಳಿ, ನೀಲಪ್ಪ ಹರಜನ, ಸುನಿಲ್ ಕುಮಾರ್ ಎಲ್, ನಾಗರಾಜ ಕುರಬಗೊಂಡ, ದೃಶ್ಯ ಕನವಳ್ಳಿ, ಮಂಜುಳಾ, ಮೌಲನಿ ನವಲಗುಂದ, ಸಚಿನ್ ಬೂದಿಹಾಳ, ಹನುಮಂತಗೌಡ, ನಿಂಗರಾಜ ಪೂಜಾರ, ಮಾಬೂಲಿ ಕರ್ಜಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





