ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ, ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿರುವ ಯಶಸ್ಸಿನ ಸಂಕೇತವಾಗಿ ವಿಜಯಪುರ ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ವಿಜಯಪುರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಶಿಕ್ಷಣ ಸಚಿವರ ರಾಜೀನಾಮೆಯು ವಿದ್ಯಾರ್ಥಿ ಸಮುದಾಯದ ಹೋರಾಟಕ್ಕೆ ಸಂದ ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ ವಿದ್ಯಾರ್ಥಿ ಮುಖಂಡರು, ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ನಿರಂತರ ಹೋರಾಟ ಮತ್ತು ಜನರ ಬೆಂಬಲದ ಫಲವಾಗಿ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಿದರು.
ವಿಜಯೋತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಯುವಜನರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. “ನಡೆಯುವುದಿಲ್ಲ, ನಡೆಯುವುದಿಲ್ಲ… ಸರ್ವಾಧಿಕಾರ ನಡೆಯುವುದಿಲ್ಲ”, “ತೊಲಗಲಿ, ತೊಲಗಲಿ… ಸರ್ವಾಧಿಕಾರ ತೊಲಗಲಿ”, “ವಿದ್ಯಾರ್ಥಿ ಶಕ್ತಿ – ದೇಶದ ಶಕ್ತಿ”, “ವಿದ್ಯಾರ್ಥಿ ಹೋರಾಟಕ್ಕೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಐಕ್ಯತೆ ಮತ್ತು ನ್ಯಾಯಯುತ ಹೋರಾಟಕ್ಕೆ ಅಂತಿಮವಾಗಿ ಗೆಲುವು ದೊರೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಮುಂದೆಯೂ ಇದೇ ರೀತಿಯ ಒಗ್ಗಟ್ಟಿನ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಹೋರಾಟಕ್ಕೆ ಬೆಂಬಲ ನೀಡಿದ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅನಿಲ ಹೂಸಮನಿ, ಭೋಗೇಶ್ ಸೋಲಾಪುರ, ಶ್ರೀನಾಥ ಪುಜಾರಿ, ಅಕ್ಷಯ್ ಕುಮಾರ್ ಅಜಮನಿ, ವಿಜಯ್ ರಾಠೋಡ, ಪರಶುರಾಮ್ ಕರವಿನಾಳ, ಗೌಡಪ್ಪ ಬಡಿಗೇರ, ಸೋಮಲಿಂಗ ರಣದೇವಿ, ಹಮ್ಜಾ ಮಹೆಬೂಬ್, ಮಲ್ಲಿಕಾರ್ಜುನ ಕೆಂಗನಾಳ, ಸಿದ್ದಲಿಂಗ ಬಾಗೇವಾಡಿ, ಶರೀಫ್ ಬಾಣಕರ, ವಿಠಲ್ ವಡ್ಡರ, ಬಸವರಾಜ ಭಜಂತ್ರಿ, ಯಮನಪ್ಪ ಗುಣಕಿ, ನಾಗೇಂದ್ರ ದೇವಕುಳೆ, ರಮೇಶ ಕವಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





