ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಬಬಲೇಶ್ವರ ತಾಲೂಕಿನ ಮಮದಾಪುರ ಕೆರೆಗೆ ಸಿಎಸ್‌ಆರ್ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಹೊಸ ರೂಪ ನೀಡಲಾಗಿದ್ದು, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೋಮವಾರ ಕೆರೆಯನ್ನು ಲೋಕಾರ್ಪಣೆ ಮಾಡಿದರು.
ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ (HCCB) ಸಂಸ್ಥೆಯ ಪ್ರಮುಖ ಸಮುದಾಯ ಪಾಲುದಾರಿಕೆ ಕಾರ್ಯಕ್ರಮ ಪ್ರಾಜೆಕ್ಟ್ ಶೈನ್ ಅಡಿಯಲ್ಲಿ, ಎಸ್.ಎಂ. ಸೆಹಗಲ್ ಫೌಂಡೇಶನ್ ಸಹಯೋಗದಲ್ಲಿ ಮಮದಾಪುರ ಕೆರೆಯ ಸುತ್ತಮುತ್ತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಲೋಕಾರ್ಪಣೆ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಸುಮಾರು 400 ವರ್ಷಗಳ ಹಿಂದೆ ಆದಿಲ್ ಶಾಹಿ ಅರಸರು ಮಮದಾಪುರ ಕೆರೆಯನ್ನು ನಿರ್ಮಿಸಿದ್ದರು. ಬೇರೆ ಪ್ರದೇಶಗಳಿಂದ ಭತ್ತದ ತಳಿಗಳನ್ನು ತಂದು ಇಲ್ಲಿ ನಾಟಿ ಮಾಡಿಸಿ, ರೈತರಿಗೆ ಭತ್ತದ ಕೃಷಿಗೆ ಉತ್ತೇಜನ ನೀಡಿದ್ದರು. ರಾಜ್ಯದಲ್ಲಿಯೇ ಮಮದಾಪುರ ಕೆರೆ ಮೂರನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.
“ಐತಿಹಾಸಿಕ ಕೆರೆಯನ್ನು ತುಂಬುವಾಗ ಅನೇಕರು ಕುಹಕವಾಡಿದ್ದರು. ಆದರೆ ಕೆರೆಯನ್ನು ತುಂಬಿಸಿ ಈ ಭಾಗದ ಗ್ರಾಮಗಳಿಗೆ ನೀರು ಒದಗಿಸುವ ಮೂಲಕ ಅಸಾಧ್ಯವೆಂಬುದು ಯಾವುದೂ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ” ಎಂದು ಸಚಿವರು ಹೇಳಿದರು.
ಇದೀಗ HCCB ಸಹಭಾಗಿತ್ವದಲ್ಲಿ ಕೆರೆಯ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕೆರೆಯ ಸುತ್ತ ಸಾರ್ವಜನಿಕ ಉದ್ಯಾನವನ, ಸುಸಜ್ಜಿತ ವಾಕಿಂಗ್ ಟ್ರ್ಯಾಕ್, ಸೌರ ದೀಪಗಳು, ಪ್ರವೇಶ ಮಾರ್ಗಗಳು, ಸಮುದಾಯ ಆಸನ ಪ್ರದೇಶಗಳು ಹಾಗೂ ಹನಿ ನೀರಾವರಿ ವ್ಯವಸ್ಥೆಯೊಂದಿಗೆ ಸ್ಥಳೀಯ ಸಸಿಗಳ ನೆಡುವಿಕೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಇದರಿಂದ ಮಮದಾಪುರ ಕೆರೆ ಕೇವಲ ನೀರಿನ ಸಂರಕ್ಷಣಾ ತಾಣವಾಗಿರದೆ, ಜನರ ವಿಶ್ರಾಂತಿ, ಆರೋಗ್ಯ ಹಾಗೂ ಸಮುದಾಯ ಚಟುವಟಿಕೆಗಳಿಗೆ ಸುಂದರ ತಾಣವಾಗಲಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದರು.
“ಐತಿಹಾಸಿಕ ಮಮದಾಪುರ ಕೆರೆಯನ್ನು ಮುಂದಿನ ಪೀಳಿಗೆಗಾಗಿ ದೀರ್ಘಕಾಲ ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ HCCB ಹಾಗೂ ಎಸ್.ಎಂ. ಸೆಹಗಲ್ ಫೌಂಡೇಶನ್‌ಗೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳು” ಎಂದು ಅವರು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿಯೇ ದೇಶದ ಬೆಳವಣಿಗೆಯ ಅಡಿಪಾಯ HCCB ಮುಖ್ಯ ಸಾರ್ವಜನಿಕ ವ್ಯವಹಾರಗಳು, ಸಂವಹನ ಮತ್ತು ಸುಸ್ಥಿರತೆ ಅಧಿಕಾರಿ ಹಿಮಾಂಶು ಪ್ರಿಯದರ್ಶಿ ಮಾತನಾಡಿ, ದೇಶದ ಬೆಳವಣಿಗೆ ಗ್ರಾಮೀಣ ಪ್ರದೇಶಗಳಿಂದಲೇ ಆರಂಭವಾಗುತ್ತದೆ ಎಂಬ ನಂಬಿಕೆಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಾಜೆಕ್ಟ್ ಶೈನ್ ಮೂಲಕ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ, ಸಮುದಾಯಗಳ ಅಗತ್ಯಗಳಿಗೆ ಅನುಗುಣವಾಗಿ ಪ್ರಾಯೋಗಿಕ ಹಾಗೂ ಸಮುದಾಯ ಕೇಂದ್ರಿತ ಪರಿಹಾರಗಳನ್ನು ಒದಗಿಸಲಾಗುತ್ತಿದೆ. ಮಮದಾಪುರ ಕೆರೆಯ ಉಪಕ್ರಮವು ಸಮುದಾಯ ಮಾಲೀಕತ್ವ ಮತ್ತು ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವುದರೊಂದಿಗೆ ದೀರ್ಘಕಾಲೀನ ಕೆರೆ ಸಂರಕ್ಷಣೆಗೆ ಒತ್ತು ನೀಡುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕೋಕಾ-ಕೋಲಾ ಸಂಸ್ಥೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಎರಡು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಪ್ರಾಜೆಕ್ಟ್ ಶೈನ್ ಮೂಲಕ ನೀರಿನ ಸಂರಕ್ಷಣೆ, ಸಮುದಾಯ ಮೂಲಸೌಕರ್ಯ, ಪರಿಸರ ಸುಸ್ಥಿರತೆ, ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಮುಖಂಡರಾದ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಮಾಧವ ಕುಲಕರ್ಣಿ, ರಫೀಕ್ ಕಾಣೆ, ಈರಗೊಂಡ ಬಿರಾದಾರ, ಮಲ್ಲಿಕಾರ್ಜುನ ಗಂಗೂರ, ಲಕ್ಷ್ಮಣ ತೇಲಿ, ಈರಣ್ಣ ಕೊಪ್ಪದ, ಶಿವನಗೌಡ ಬಿರಾದಾರ, ಹಣಮಂತ ಹರಣಟ್ಟಿ, ಭರತ ಗಸ್ತಿ, ಶಂಕ್ರಪ್ಪ ಜನವಾಡ, ವೆಂಕಟೇಶ ಬಿರಾದಾರ, ಬಸಪ್ಪ ಭಾವಿಕಟ್ಟಿ, ಡಾ. ಎಂ.ಎಚ್. ಪಾಟೀಲ, ಡಾ. ಕೌಸರ ಅತ್ತಾರ, ಮುತ್ತೇಶ ಗಡ್ಡದಮಠ, ಸದಾಶಿವ ಹೆಬ್ಬಿ, ಬಸವರಾಜ ಗಲಗಲಿ, ಬಸವರಾಜ ಕೋಲಕಾರ, ಶಬ್ಬೀರ್ ಕಾಣೆ, ಸುರೇಶ ಕರಿಕಲ್ಲ, ಮಲ್ಲಪ್ಪ ಕೋಲಕಾರ, ಮಹಾಂತೇಶ ಕುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




