ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಸುಮಾರು 15 ಮಂದಿ ಗಾಯಗೊಂಡ ಘಟನೆ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ಮಂಗಳವಾರ ನಡೆದಿದೆ. ಘಟನೆ ಸಂಬಂಧ 20 ಮಂದಿಯ ವಿರುದ್ಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿಲ್ಲೆಸುಗೂರು ಕ್ಯಾಂಪ್‌ನ ಪುನರ್ವಸತಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಚರ್ಚ್ ಹಾಗೂ ಆಂಜನೇಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿಂದ ಎರಡು ಗುಂಪುಗಳ ನಡುವೆ ವಿವಾದ ಮುಂದುವರಿದಿತ್ತು. ಈ ಹಿಂದೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಎರಡೂ ಗುಂಪುಗಳ ನಡುವೆ ಸಂಧಾನ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿತ್ತು.
ಇಂದು ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ಹಾಗೂ ಹಲ್ಲೆ ನಡೆದ ಪರಿಣಾಮ ಸುಮಾರು 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಚ್ಚಾಲಿಯಲ್ಲಿ ಚರ್ಚ್–ಆಂಜನೇಯ ಮೂರ್ತಿ ವಿವಾದ: ಆ.18ರವರೆಗೆ ನಿಷೇಧಾಜ್ಞೆ
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆ.11ರ ಸಂಜೆ 6.30ರಿಂದ ಆ.18ರ ಬೆಳಿಗ್ಗೆ 6.30ರವರೆಗೆ ಬಿಚ್ಚಾಲಿ ಗ್ರಾಮ, ಬಿಚ್ಚಾಲಿ ಕ್ಯಾಂಪ್ ಹಾಗೂ ಪುನರ್ವಸತಿ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಡಪನೂರು ಪೊಲೀಸ್ ಠಾಣೆಯಲ್ಲಿ 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




