ಸ್ಪಷ್ಟ ಮಾರ್ಗಸೂಚಿಗಳಿಲ್ಲದೆ ವಿಬಿಜಿ ರಾಮ್‌ಜಿ ಯೋಜನೆಯಡಿ ನಿಯಮಬಾಹಿರವಾಗಿ ಕೆಲಸ ನಿರ್ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಮೇಲೆ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಆಗಸ್ಟ್ 15ರಿಂದ ರಾಜ್ಯಾದ್ಯಂತ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಅಧ್ಯಕ್ಷ ರಮೇಶ್ ನಡಗೇರಿ ತಿಳಿಸಿದರು.
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒಗಳ ಸಮಸ್ಯೆಗಳನ್ನು ಈಗಾಗಲೇ ಇಲಾಖಾ ಸಚಿವರ ಕಚೇರಿ, ಮೇಲಧಿಕಾರಿಗಳು ಹಾಗೂ ರಾಜ್ಯದ ಎಲ್ಲ 31 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದಾಗೂ ಯಾವುದೇ ಸೂಕ್ತ ಸ್ಪಂದನೆ ದೊರೆತಿಲ್ಲ. ಬದಲಾಗಿ ಒತ್ತಡ ಮತ್ತು ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿದರು.
ಯೋಜನೆಗೆ ಸ್ಪಷ್ಟ ನಿಯಮಾವಳಿ ಹಾಗೂ ಮಾರ್ಗಸೂಚಿಗಳಿಲ್ಲ. ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಗತ್ಯವಿರುವ ಸೂಕ್ತ ವಿನಾಯಿತಿ ಆದೇಶಗಳನ್ನೂ ನೀಡಲಾಗಿಲ್ಲ. ಒಂದು ಜಿಲ್ಲೆಯಲ್ಲಿ ಅನುಮತಿಸುವ ಕಾಮಗಾರಿಯನ್ನು ಮತ್ತೊಂದು ಜಿಲ್ಲೆಯಲ್ಲಿ ಮಾಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಪಿಡಿಒಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ದೂರಿದರು.
ಅನುಮೋದಿತ ಕ್ರಿಯಾ ಯೋಜನೆ ಇಲ್ಲದೆ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸದೆಯೇ ಕಾಮಗಾರಿಗಳನ್ನು ತಕ್ಷಣ ಆರಂಭಿಸುವಂತೆ ಪಿಡಿಒಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಬರಗಾಲದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಉತ್ತಮ ಉದ್ದೇಶವಾದರೂ, ನಿಯಮಗಳನ್ನು ಮೀರಿ ಕಾಮಗಾರಿ ಕೈಗೊಳ್ಳುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದರು.
“ಇತರೆ ಇಲಾಖೆಗಳ ಕಾಮಗಾರಿಗಳ ತಾಂತ್ರಿಕ ಮಾಹಿತಿ ಹಾಗೂ ಮೌಲ್ಯಮಾಪನ ಪಿಡಿಒಗಳಿಗೆ ಲಭ್ಯವಿಲ್ಲದಿದ್ದರೂ, ಅಂತಹ ಕಾಮಗಾರಿಗಳ ಬಿಲ್ ಪಾವತಿಯ ಹೊಣೆಯನ್ನು ಪಿಡಿಒಗಳ ಮೇಲೆಯೇ ಹಾಕಲಾಗುತ್ತಿದೆ. ಇದರಿಂದ ಮುಂದೆ ಉಂಟಾಗಬಹುದಾದ ಕಾನೂನು ಮತ್ತು ಆರ್ಥಿಕ ಲೋಪಗಳಿಗೆ ಪಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನೈಜ ಬೇಡಿಕೆ ಇಲ್ಲದಿದ್ದರೂ ಕೃತಕ ಎನ್‌ಎಂಆರ್‌ಗಳನ್ನು ಸೃಷ್ಟಿಸಲು ಒತ್ತಾಯಿಸುವುದು, ಕಚೇರಿ ಅವಧಿ ಮುಗಿದ ಬಳಿಕ ರಾತ್ರಿ ವೇಳೆಯಲ್ಲಿ ಸಭೆ ನಡೆಸುವುದು, ಶೋಕಾಸ್ ನೋಟಿಸ್ ನೀಡುವುದು ಹಾಗೂ ಅಮಾನತಿನ ಬೆದರಿಕೆ ಹಾಕುವ ಮೂಲಕ ಪಿಡಿಒಗಳಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ರಮೇಶ್ ನಡಗೇರಿ ಆರೋಪಿಸಿದರು.
“ಸಮಸ್ಯೆಗಳಿಗೆ ಸರ್ಕಾರ ಹಾಗೂ ಇಲಾಖೆ ತಕ್ಷಣ ಸ್ಪಂದಿಸಿ ಸ್ಪಷ್ಟ ಮಾರ್ಗಸೂಚಿ ಮತ್ತು ಅಗತ್ಯ ಆದೇಶಗಳನ್ನು ಹೊರಡಿಸಬೇಕು. ಇಲ್ಲದಿದ್ದರೆ ಆಗಸ್ಟ್ 15ರಿಂದ ರಾಜ್ಯದಾದ್ಯಂತ ಪಿಡಿಒಗಳು ಅಸಹಕಾರ ಚಳವಳಿ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಅವರು ಎಚ್ಚರಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸೂರ್ಯವಂಶಿ ಹಾಗೂ ಸಿಂದಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಹಾಲಳ್ಳಿ ಉಪಸ್ಥಿತರಿದ್ದರು.




