ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಗೃಹಸಚಿವ ಪ್ರಿಯಾಂಕ್ ಖರ್ಗೆ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನೋಂದಣಿ ಕುರಿತು ಪ್ರಶ್ನೆಯೊಂದನ್ನು ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ರಮೇಶ ಜಿಗಜಿಣಗಿ ಅವರು, “ಪ್ರಿಯಾಂಕ್ ಖರ್ಗೆ ಒಬ್ಬ ದಲಿತ ಮನುಷ್ಯ, ಅವನಿಗೇಕೆ ಬೇಕು ಆರ್‌ಎಸ್‌ಎಸ್ ವಿಚಾರ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಸಂಸದರ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಸಂಸದರ ಹೇಳಿಕೆಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶ್ರೀನಾಥ್ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯಪುರ ನಗರದ ಅಂಬೇಡ್ಕರ್ ವೃತ್ತದ ಸಮೀಪದ ಹಳೆ ಪ್ರವಾಸಿ ಮಂದಿರದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ವಾಪಸ್ ಕಳುಹಿಸಿದರೂ ಕೂಡ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಂಸದರ ಕಚೇರಿಯತ್ತ ತೆರಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಕಚೇರಿಯೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆ ಗಾಂಧಿ ಚೌಕ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಳೆ ಪ್ರವಾಸಿ ಮಂದಿರದ ಮುಖ್ಯ ದ್ವಾರದಲ್ಲೇ ಅವರನ್ನು ತಡೆದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯನ್ನು ಮನಗಂಡು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶ್ರೀನಾಥ್ ಪೂಜಾರಿ ಸೇರಿದಂತೆ ಹಲವು ಹೋರಾಟಗಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಬಳಿಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಾಥ್ ಪೂಜಾರಿ, “ದೇಶದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಬಗ್ಗೆ ಸಾರ್ವಜನಿಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಜಯಪುರ ಸಂಸದರು ‘ಆರ್‌ಎಸ್‌ಎಸ್ ವಿಷಯಕ್ಕೆ ಹೋದರೆ ನಿಮ್ಮನ್ನು ಖಲಾಸ್ ಮಾಡುತ್ತಾರೆ, ಕೊಲ್ಲುತ್ತಾರೆ’ ಎಂಬ ಅರ್ಥದಲ್ಲಿ ಮಾತನಾಡಿರುವುದು ಅತ್ಯಂತ ಖಂಡನೀಯ. ಅವರೂ ಕೂಡ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಯಾಗಿದ್ದರೂ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹಾಗೂ ಭಯ ಹುಟ್ಟಿಸುವ ರೀತಿಯ ಹೇಳಿಕೆ ನೀಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮುದ್ದೇಬಿಹಾಳ | ಮಾದಕದ್ರವ್ಯ ಮುಕ್ತ ಸಮಾಜಕ್ಕೆ ಪಿಎಸ್ಐ ಸಂಜಯ ತಿಪ್ಪರೆಡ್ಡಿ ಕರೆ
“ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತ ದಲಿತ ಸಮುದಾಯವನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಂಸದರನ್ನು ಪ್ರಶ್ನಿಸಲು ಅವರ ಕಚೇರಿಗೆ ತೆರಳಿದ್ದ ನಮ್ಮನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸಂಸದ ರಮೇಶ ಜಿಗಜಿಣಗಿ ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಜನರ ಪ್ರಬಲ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಎಂಎಂಡಿಸಿ ಮುಖಂಡರಾದ ಹಾಫಿಜ್ ಸಿದ್ದಖಿ, ಶಬ್ಬೀರ್ ಕಾಗಜಕೊಟಿ, ರಮೇಶ್ ರಾಠೋಡ್, ರಾಕೇಶ್ ಚವ್ಹಾಣ, ಇಲಿಯಾಸ್, ಸಂತೋಷ, ಯಮನೂರಿ ಸಿಂಧಗೆರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.




