ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮ ಹೆಸರು ಸೇರ್ಪಡೆಗಳನ್ನು ತಡೆಯುವಂತೆ ಹಾಗೂ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, “ಎಸ್‌ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಜಾರಿಗೊಳಿಸಬೇಕು. ಯಾವುದೇ ರೀತಿಯ ನಿಯಮ ಉಲ್ಲಂಘನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಬಿಎಲ್‌ಒಗಳು ಕಾಂಗ್ರೆಸ್ ಮುಖಂಡರು ಹಾಗೂ ಬಿಎಲ್‌ಒ-2 ಪ್ರತಿನಿಧಿಗಳೊಂದಿಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ” ಎಂದು ಆರೋಪಿಸಿದರು.
“ವಿದ್ಯಾಭ್ಯಾಸಕ್ಕಾಗಿ ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳ ಹೆಸರನ್ನು ಮತಪಟ್ಟಿಯಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ನೆರೆಯ ಗ್ರಾಮಗಳಿಂದ ಉದ್ಯೋಗಕ್ಕಾಗಿ ಬಂದಿರುವ ಕೂಲಿ ಕಾರ್ಮಿಕರ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಇಂತಹ ಅಕ್ರಮ ಸೇರ್ಪಡೆಗಳನ್ನು ತಕ್ಷಣವೇ ತೆಗೆದುಹಾಕಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಸಮಸಮಾಜದ ಕಲ್ಪನೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರೂ ಒಬ್ಬರು: ಪ್ರೊ. ಹಾ ಮಾ ನಾಗಾರ್ಜುನ
This video cannot be played in your browser. Open the video directly
‘ಇದೇ ವೇಳೆ, ಬಿಎಲ್‌ಒಗಳು ಮತದಾರರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ, ಬೂತ್‌ಗಳಲ್ಲಿ ಲಭ್ಯವಿಲ್ಲ, ಫೋನ್ ಕರೆಗಳಿಗೆ ಸ್ಪಂದಿಸುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ, ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು” ಎಂದು ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ರಫೀಕ್ ಟಪಾಲ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಭಣ್ಣಿ, ಅಬ್ದುಲ್ ರಜಾಕ ಹೊರ್ತಿ, ಸೋಮನಾಥ ಕಳ್ಳಿಮನಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಪಾಲಿಕೆ ಸದಸ್ಯೆ ಆರತಿ ಶಾಹಪೂರ, ವಸಂತ ಹೊನಮೋಡೆ ಇದ್ದರು.





