ವೈರಾಗ್ಯನಿಧಿ, ವೀರವಿರಾಗಿಣಿ ಅಕ್ಕ ಮಹಾದೇವಿ ಅವರು ಸ್ತ್ರೀ ಕುಲದ ಧೈರ್ಯ, ಸ್ಥೈರ್ಯ, ಸ್ವಾಭಿಮಾನದ ನಿಧಿಯಾಗಿದ್ದಾರೆ ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ.ಟಿ ಅವರು ನುಡಿದರು.
ಗುರುವಾರ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿಯವರ ಜಯಂತಿಯ ಪ್ರಯುಕ್ತ ವಚನಕಾರ್ತಿ ಅಕ್ಕ ಮಹಾದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ʼಕನ್ನಡದ ಪ್ರಥಮ ಕವಯತ್ರಿ, ವಚನಕಾರ್ತಿಯಾದ ಅಕ್ಕನ ಕೊಡುಗೆ ಅನನ್ಯವಾದುದು. ಅಕ್ಕಮಹಾದೇವಿಯವರ 434 ವಚನಗಳು ತುಂಬಾ ಭಾವಗೀತಾತ್ಮಕವಾಗಿವೆʼ ಎಂದರು.
“ಅಕ್ಕ ಮಹಾದೇವಿಯವರ ಅಂತರಂಗದ ದರ್ಶನವಾಗುವುದು ಅವರ ಅಮೂಲ್ಯ ವಚನಗಳಲ್ಲಿ. ಉಡುತಡಿಯಿಂದ ಕಲ್ಯಾಣ, ಕಲ್ಯಾಣದಿಂದ ಶ್ರೀಶೈಲದ ಕದಳಿವನದವರೆಗಿನ ಅಕ್ಕನವರ ಪಯಣ ಅಗ್ರಗಣ್ಯವಾದುದು. ಅಕ್ಕನ ವೈರಾಗ್ಯದ ಪರಿ ಜನರನ್ನು ಭಕ್ತಿಪರವಶಗೊಳಿಸುತ್ತದೆ. ಅಕ್ಕನ ಪ್ರತಿಯೊಂದು ವಚನಗಳು ಓದುಗರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುತ್ತವೆ. ಸಮಾನತೆಯ ಸಿದ್ಧಾಂತವನ್ನು, ಭಕ್ತಿಯ ಪರಾಕಾಷ್ಠತೆಯನ್ನು ಅಕ್ಕನ ಅನನ್ಯ ವಚನಗಳಲ್ಲಿ ಕಾಣಬಹುದಾಗಿದೆ” ಎಂದರು.
ಕನ್ನಡ ವಿಭಾಗದ ಉಪನ್ಯಾಸಕ ಡಾ.ರಾಮಚಂದ್ರ ಗಣಾಪೂರ ಅವರು ವಿಶೇಷ ಉಪನ್ಯಾಸ ನೀಡಿ, “ಅಕ್ಕಮಹಾದೇವಿ ಮನುಕುಲದ ಮಹಾಮಾತೆ. ಜೀವನದಲ್ಲಿ ಏನೇ ಅಡೆತಡೆ ಬಂದರೂ ಮನದಲ್ಲಿ ಸಮಾಧಾನವಾಗಿರಬೇಕೆಂಬ ಅಕ್ಕ ಅವರ ಸಂದೇಶ ಅಪೂರ್ವವಾದುದು. ಅಕ್ಕ ಮಹಿಳೆಯರ ಅಸ್ಮಿತೆಯಾಗಿ ಕಂಗೊಳಿಸುತ್ತಾರೆʼ ಎಂದರು.
ಇದನ್ನೂ ಓದಿ : ಬಸವಕಲ್ಯಾಣ | ಏ.4, 5ರಂದು ದಾನಮ್ಮದೇವಿ ಉತ್ಸವ, ಶರಣ ಸಮಾಗಮ
ಕಾರ್ಯಕ್ರಮದಲ್ಲಿ ಕೇಂದ್ರದ ವಿಶೇಷಾಧಿಕಾರಿ ಡಾ.ರವೀಂದ್ರನಾಥ ವಿ.ಗಬಾಡಿ ಸೇರಿದಂತೆ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




