‘ನಿಮ್ಮೊಂದಿಗೆ ನಾವಿದ್ದೇವೆ; ಆತ್ಮಹತ್ಯೆ ಬೇಡ, ಆತ್ಮವಿಶ್ವಾಸವಿರಲಿ’: ರೈತ ಕಣ್ಮಣಿ ಪುಟ್ಟಣ್ಣಯ್ಯ ನೆನಪು

Date:

ಕನ್ನಡನಾಡು ಕಂಡಂತಹ ಅಪ್ರತಿಮ ಹೋರಾಟಗಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ, ರೈತಪರ, ಗ್ರಾಮೀಣಪರ ಯೋಜನೆಗಳನ್ನು ರೂಪಿಸಿ, ಕೃಷಿಯನ್ನು ಉಳಿಸಲು ಶ್ರಮಿಸಿ, ಶಾಸಕರಾಗಿದ್ದಾಗ ರೈತರ ಸಾವಿಗೆ ನೊಂದು ‘ನಿಮ್ಮೊಂದಿಗೆ ನಾವಿದ್ದೇವೆ; ಆತ್ಮಹತ್ಯೆ ಬೇಡ, ಆತ್ಮವಿಶ್ವಾಸವಿರಲಿ ರೈತ ಬಂಧುಗಳೇ’ ಎಂದು ಕರೆ ನೀಡಿದ ಧೀಮಂತ ನಾಯಕ ಕೆ ಎಸ್ ಪುಟ್ಟಣ್ಣಯ್ಯ. ಅವರ 76ನೇ ಜನ್ಮದಿನದ ಸುಸಂದರ್ಭದಲ್ಲಿ ರಾಜಕಾರಣಿಯಾಗಿದ್ದರೂ ರೈತ ನಾಯಕನಾಗಿ, ಜನಾನುರಾಗಿಯಾಗಿ ನಡೆದುಕೊಂಡ ಪರಿ ಅನನ್ಯವಾದದ್ದು.

- Advertisement -

ರಾಜ್ಯದ ಹೋರಾಟದ ಇತಿಹಾಸದ ಮಟ್ಟಿಗೆ ಅತ್ಯಂತ ಪ್ರಭಾವಶಾಲಿ ಹಾಗೂ ಗೌರವನ್ವಿತ ವ್ಯಕ್ತಿತ್ವದ ಮೂಲಕ ರಾಜಕಾರಣಿಯಾಗಷ್ಟೇ ಅಲ್ಲದೇ ರೈತರ ಪರವಾಗಿ, ಕೃಷಿ ಏಳಿಗೆಗಾಗಿ ಇಡೀ ಜೀವನ ಮೀಸಲಿಟ್ಟ ವ್ಯಕ್ತಿತ್ವ. ರೈತ ಚೇತನ ಪ್ರೊ. ನಂಜುಂಡಸ್ವಾಮಿ ಅವರ ನಂತರ ಸಮರ್ಥವಾಗಿ ರೈತ ಸಂಘಟನೆಯನ್ನ ಮುನ್ನಡೆಸಿದ ಕೀರ್ತಿ ಪುಟ್ಟಣ್ಣಯ್ಯನವರಿಗೆ ಸಲ್ಲುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

1949ರ ಡಿಸೆಂಬರ್.23 ರಂದು ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದಲ್ಲಿ ಕೆ ಎಸ್ ಶ್ರೀಕಂಠೇಗೌಡ ಹಾಗೂ ಕೆ ಎಸ್ ಶಾರದಮ್ಮ ಅವರ ಮೊದಲನೇ ಮಗನಾಗಿ ಜನಿಸಿದರು. ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದು ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲಿಕೆಗಿಂತ ರೈತರ ಸಂಕಷ್ಟ, ನೋವಿನ ಕಡೆಗೆ ಹೆಚ್ಚಿನ ಒಲವು, ಆಸಕ್ತಿ ಬೆಳೆಯಿತು.

1983ರ ಹೊತ್ತಿಗೆ ಎಸ್ ಡಿ ಜಯರಾಮ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡು ಹಲವು ವರ್ಷಗಳ ಕಾಲ ಗ್ರಾಮೀಣ ಭಾಗದ ರೈತರು, ಕೃಷಿ ಕಾರ್ಮಿಕರು, ಮಹಿಳೆಯರ ಪರವಾಗಿ ಸಾಕಷ್ಟು ಹೋರಾಟ ನಡೆಸಿ ಪಾಂಡವಪುರ ತಾಲ್ಲೂಕು ಅಧ್ಯಕ್ಷರಾದರು. ನಂತರದ ದಿನಗಳಲ್ಲಿ ಮಂಡ್ಯ ಜಿಲ್ಲಾಧ್ಯಕ್ಷರಾಗಿ, ಮೈಸೂರು ವಿಭಾಗ ಮಟ್ಟದ ಕಾರ್ಯದರ್ಶಿಯಾಗಿ 1999 ರಿಂದ 2012ರ ತನಕ ರಾಜ್ಯಾಧ್ಯಕ್ಷರಾಗಿ, ಮುಂದೆ ‘ಸರ್ವೋದಯ ಕರ್ನಾಟಕ ಪಕ್ಷ’ದ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

1994ರಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದೊಂದಿಗೆ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ, 2013ರಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ‘ಸರ್ವೋದಯ ಕರ್ನಾಟಕ ಪಕ್ಷ’ದಿಂದ ಸ್ಪರ್ಧಿಸಿ ಚುನಾಯಿತರಾಗಿ ಶಾಸಕರಾಗುತ್ತಾರೆ. ಉತ್ತಮ ವಾಗ್ಮಿಯಾಗಿದ್ದ ಪುಟ್ಟಣ್ಣಯ್ಯನವರು ನೇರ ನುಡಿಗೆ ಹೆಸರಾದವರು.

ಕ್ರಾಂತಿಕಾರಿ ಚಾಟಿಯಾಗಿ ಶಕ್ತಿ ಸೌಧದ ಅಧಿಕಾರಿಗಳನ್ನೇ ನಡುಗಿಸಿದ ರೈತ ನಾಯಕ. ಹಾಸ್ಯಭರಿತವಾಗಿ ತಮ್ಮ ಮಾತಿನ ಮೂಲಕ ಮೊನಚಾಗಿ ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಗುಡುಗುತ್ತಿದ್ದರು. ಹಸಿರಿಗಾಗಿ ಬದುಕಿ, ಅನ್ನದಾತರ ಬದುಕಾಗಿದ್ದು ಇದೇ ಪುಟ್ಟಣ್ಣಯ್ಯ. ಸಕ್ಕರೆ ಕಾರ್ಖಾನೆ ಮಾಲೀಕರ ಚಳಿ ಬಿಡಿಸಿ, ಕಬ್ಬು ಬೆಳೆಗಾರರ ಪರ ಹೋರಾಟಕ್ಕೆ ನಿಂತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದವರು. ರೈತರು ಅಧಿಕಾರಿಗಳ ಮುಂದೆ ಬಂದಾಗ ಕುಳಿತು ಮಾತನಾಡಿಸುವಷ್ಟು ಸೌಜನ್ಯ ಕಲಿತಿಲ್ಲ ಅಂದಮೇಲೆ, ಆಡಳಿತ ಸುಧಾರಣೆ ಮಾಡಲು ಹೇಗೆ ಸಾಧ್ಯ? ಎಂದು ಸದನದಲ್ಲಿ ಪ್ರಶ್ನೆ ಮಾಡಿದ್ದರು.

ಗುಲಾಮಗಿರಿ ಇನ್ನೂ ಹೋಗಿಲ್ಲ, ಕಾರಲ್ಲಿ, ಸೂಟುಬೂಟು ಹಾಕ್ಕೊಂಡು ಬರೋರನ್ನ ಕುರ್ಚಿಲಿ ಕೂರಿಸೋದು. ಅದೇ ಪಂಚೆ, ಟವೆಲ್ ಹಾಕ್ಕೊಂಡು ಬಂದ್ರೆ ನಿಲ್ಲಿಸಿ ಮಾತಾಡ್ತೀವಿ ಅಂದ್ರೆ ಆಡಳಿತ ವ್ಯವಸ್ಥೆಗೆ ಏನಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆಡಳಿತಕ್ಕೆ ಸಂಸ್ಕಾರ ಇರಬೇಕು. ನಾವುಗಳು ಸಹ ರೈತರ ಮಕ್ಕಳಾಗಿ ಹುಟ್ಟಿದವರು, ರೈತರು ಬೆಳೆಯುವ ಅನ್ನ ತಿಂದು ಬೆಳೆದವರು. ಅನ್ನದಾತನಿಗೆ ಗೌರವ ಕೊಡುವುದನ್ನು ಕಲಿಯಬೇಕಿತ್ತು. ಆದರೆ, ಕಲಿತಿಲ್ಲ ಎಂದು ವಿಷಾದಿಸಿದ್ದರು.

“ಜನಪರ ಚಳುವಳಿಯ ನಾಯಕರನ್ನ ನಿರ್ಲಕ್ಷ್ಯ ಮಾಡಬೇಡಿ. ಹಸಿರು ಟವೆಲ್ ಎಚ್ಚರಿಕೆಯ ಗಂಟೆ. ಕೆಲಸ ಮಾಡಿ, ಇಲ್ಲ ನಾವೇ ಕೆಲಸ ಮಾಡಿಸ್ತೀವಿ. ತಪ್ಪು ಮಾಡಿದಾಗ ಹೇಗೆ ಪ್ರತಿಭಟಿಸಬೇಕು? ಹೇಗೆ ಕೆಲಸ ಮಾಡಿಸಬೇಕು? ನಮಗೂ ಗೊತ್ತಿದೆ. ಉತ್ತು ಬಿತ್ತಿದ ಕೈಗಳಿವು, ಅನ್ನ ಹಾಕಿದ ಕೈಗಳಿವು ನೋವು ಕೊಡಬೇಡಿ. ತಿನ್ನುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳಬೇಡಿ ಎಂದು ಗದ್ಗದಿತರಾಗಿದ್ದರು. ರೈತರು ಗುಲಾಮರಲ್ಲ. ಮಂತ್ರಿಯೇ ಆಗಲಿ, ಅಧಿಕಾರಿಯೇ ಆಗಲಿ ಅವಿದ್ಯಾವಂತ ಬೆವರು ಸುರಿಸಿದ ಅನ್ನವನ್ನೇ ಉಣ್ಣಬೇಕು ನೆನಪಿಡಿ” ಎಂದಿದ್ದರು.

ಗಾಂಧಿ ಮಾತಾಡಿಸುವವರು ಇಲ್ಲ, ನಮ್ಮಲ್ಲಿ ಸೇಂದಿ ಮಾತಾಡಿಸುವವರು ಇದ್ದಾರೆ ಎಂದು ಸರ್ಕಾರವನ್ನು ಛೇಡಿಸಿದ್ದರು. ನಮ್ಮ ಅಧಿಕಾರಿಗಳ ಪರಿಸ್ಥಿತಿ ಹೇಗೆ ಅಂದ್ರೆ ಬ್ರಿಟಿಷರು ನಮ್ಮನ್ನು ಬಿಟ್ಟು ಹೋದ್ರೂ, ಬುದ್ದಿ ಮಾತ್ರ ಹೋಗಿಲ್ಲ. ಹಳ್ಳಿಯವರಿಗೆ ಸ್ವಾತಂತ್ರ್ಯ ಬೇಕಿದೆ. ಗಾಂಧೀ ಫೋಟೋ ಇಟ್ಕೊಂಡಿದ್ದೀವಿ ಯಾಕೆ ಇಟ್ಕೊಂಡಿದ್ದೀವಿ ಅನ್ನೋದೆ ಗೊತ್ತಿಲ್ಲ ಎಂದು ಅಸಮಾಧಾನಗೊಂಡಿದ್ದರು. ಪೋಡಿ ಗ್ರಾಮವನ್ನ ಕಂದಾಯ ಗ್ರಾಮ ಮಾಡದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಚಳವಳಿಯ ಮೂಲಕ ಬೆಂಡೆತ್ತಿದರು.

ಗ್ರಾಮದ ಪ್ರಗತಿ, ದೇಶದ ಪ್ರಗತಿ. ಗ್ರಾಮದ ಅಭಿವೃದ್ಧಿ ಯಾಕೆ ಮಾಡಲು ಸಾಧ್ಯ ಇಲ್ಲ. ನೀರು ಕಟ್ಟಿದರೆ ಪಂಚಾಯತಿ, ಇಲ್ಲಾಂದರೆ ಡ್ರೈನೇಜ್ ಎಂದು ಕಿಡಿಕಾರಿದ್ದರು. ಗ್ರಾಮ ಅಭಿವೃದ್ಧಿಗಳ ಬಗ್ಗೆ ಸರ್ಕಾರ ಹೇಳುವ ಸುಳ್ಳುಗಳನ್ನ ಒಂದೊಂದಾಗಿಯೇ ಸದನದಲ್ಲಿ ಪುಂಖಾನುಪುಂಖವಾಗಿ ತೆರೆದಿಟ್ಟು ಗಮನ ಸೆಳೆದರು. ಒಬ್ಬ ರೈತ ನಾಯಕ ಸದನದಲ್ಲಿ ಇದ್ದರೆ ಹೇಗೆಲ್ಲ ಸರ್ಕಾರವನ್ನ ಪ್ರಶ್ನಿಸಿ ಜನರ ಕೆಲಸ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟರು.

2017ರಲ್ಲಿ ಹೊಸ ರಾಜಕಾರಣದ ಮುನ್ನುಡಿಯಾಗಿ ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥರಾಗಿದ್ದ ಯೋಗೇಂದ್ರ ಯಾದವ್ ಅವರ ಪಕ್ಷವನ್ನು ಸರ್ವೋದಯ ಕರ್ನಾಟಕ ಪಕ್ಷದಲ್ಲಿ ವಿಲೀನಗೊಳಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸ್ವರಾಜ್ ಇಂಡಿಯಾ’ ಲಾಂಛನ ಎತ್ತಿ ಹಿಡಿಯುವ ಮೂಲಕ ಪಕ್ಷ ವಿಲೀನ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ದೇವನೂರು ಮಹಾದೇವ, ಎಸ್ ಆರ್ ಹಿರೇಮಠ್, ಗಿರೀಶ್ ನಂದ ಗಾವ್ಕರ್, ಗುರುಪ್ರಸಾದ್ ಕೆರಗೋಡು, ಚುಕ್ಕಿ ನಂಜುಂಡಸ್ವಾಮಿ, ಚಾಮರಸಮಾಲಿ ಪಾಟೀಲ್ ಸೇರಿದಂತೆ ಹಲವರ ಘನ ಉಪಸ್ಥಿತಿಯಿತ್ತು. ಅಂದು ಪ್ರಮುಖವಾಗಿ ‘ಭಾರತದ ರಾಜಕಾರಣದ ಶುದ್ಧೀಕರಣಕ್ಕಾಗಿ ಯುಗ ಧರ್ಮ ಪಾಲಿಸುವ ಹೊಸ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು’ ಎಂದು ಪ್ರೊ. ಯೋಗೇಂದ್ರ ಯಾದವ್ ಹೇಳಿದ್ದರು.

ಸರ್ವೋದಯ ಕರ್ನಾಟಕ ಪಕ್ಷದ ಸಂಸ್ಥಾಪಕರಾದ ದೇವನೂರು ಮಹಾದೇವ ಅವರು “ನಮ್ಮೆದುರಿಗಿನ ರಾಜಕಾರಣದ ದುರಂತ ವ್ಯವಸ್ಥೆ ನೆನೆದರೆ ಹುಲಿಗೆ ಹುಣ್ಣು ಬಂದಂತೆ. ಒಂದು ಗಾಯಕ್ಕೆ ಇನ್ನೊಂದು ಗಾಯ ಮಾಡಿಕೊಂಡು, ಇನ್ನೊಂದು ಗಾಯದಿಂದ ಚರ್ಮ ಕಿತ್ತು ಅಂಟಿಸಿದಂತೆ. ಶಮನಕ್ಕೆ ಮೈಪೂರ ಕೀಳುವುದು, ಗಾಯಕ್ಕೆ ಗಾಯ ಮಾಡಿಕೊಂಡಂತೆ” ಎಂದಿದ್ದರು.

ಇದೇ ಸಂದರ್ಭದಲ್ಲಿ ಕೆ ಎಸ್ ಪುಟ್ಟಣ್ಣಯ್ಯನವರು ಮಾತನಾಡಿ, “ಸಮಾಜದಲ್ಲಿ ಮಲಗಿರುವ ದ್ವೇಷ, ಒಡಕುಗಳನ್ನು ಬಡಿದೆಬ್ಬಿಸಿ ರಾಜಕಾರಣ ಮಾಡಿದರೆ, ನಾವುಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಕಳೆದು ಹೋಗುತ್ತಿದ್ದೇವೆ. ಹೊಸ ರಾಜಕೀಯ ಧೃವೀಕರಣವಾಗಬೇಕು. ಮಾರುಕಟ್ಟೆ ಹಾಗೂ ಪ್ರಭುತ್ವ ಮೂಲಭೂತವಾದಿಗಳ ರಾಜಕಾರಣಕ್ಕೆ ಅಭಿವೃದ್ಧಿಯೊಂದೇ ಮೂಲಮಂತ್ರವಾಗಿದೆ. ಹೀಗಾಗಿಯೇ, ಹೊಸ ಜಾತಿ ಧೃವೀಕರಣ ಆಧಾರದ ಮೇಲೆ ತೃತೀಯ ಶಕ್ತಿ ಕಟ್ಟಬೇಕಿದೆ” ಎಂದಿದ್ದರು.

ಇಂತಹ ನವ ಮನ್ವಂತರಕ್ಕೆ ಮೈ ಒಗ್ಗಿಸಿಕೊಂಡಿದ್ದ ರೈತ ನಾಯಕ ಪುಟ್ಟಣ್ಣಯ್ಯ ರೈತರ ವಿಚಾರವಾಗಿ, ಆತ್ಮಹತ್ಯೆ ಸರಣಿಗೆ ಮನನೊಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ “ರೈತರ ಸಮಾಧಿ ಮೇಲಿನ ರಾಜಕಾರಣ ಕೈಬಿಡೋಣ. ವಿಪಕ್ಷ-ಆಡಳಿತರೂಢ ಪಕ್ಷಗಳು ಸೇರಿ ರೈತರ ಕಾಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ವಿನಂತಿಸೋಣ. ಅಂತಹ ನಿರ್ಣಯವನ್ನ ಸದನದಲ್ಲಿ ಇಂದು ತೆಗೆದುಕೊಳ್ಳೋಣ. ರೈತರು ಯಾವುದೇ ಕಾರಣಕ್ಕೂ ಸಾಯಬಾರದು. ಸಮಗ್ರ ಕೃಷಿ ನೀತಿ ಜಾರಿ ಮಾಡುವುದರ ಮೂಲಕ ರೈತರಲ್ಲಿ ನವಚೈತನ್ಯ ಮೂಡಿಸೋಣ” ಎಂದು ಕರೆ ನೀಡಿದ್ದರು.

“ಪ್ರತಿ ರೈತನ ಸಾವಿನಲ್ಲಿ ನೋವಿದೆ. ನೋವಿನಲ್ಲಿ ಒಂದೊಂದು ಸಂದೇಶವಿದೆ. ನಮಗೇನು? ಎಂಬ ಧೋರಣೆ ಬಹುತೇಕರಲ್ಲಿರಬಹುದು. ಆದರೆ, ಪ್ರತಿ ಸಾವಿನಲ್ಲಿ ನಮ್ಮಗಳ ಸಾವಿನ ಸಂದೇಶವಿದೆ. ರೈತ ಅನ್ನ ಬೆಳೆದರೆ ಮಾತ್ರ ನಮ್ಮ ಬದುಕು, ಇಲ್ಲವಾದಲ್ಲಿ ಜೀವತೆತ್ತಬೇಕಾಗುತ್ತದೆ ಎಂದು ಎಚ್ಚರಿಸುತ್ತಾ, ‘ನಿಮ್ಮೊಂದಿಗೆ ನಾವಿದ್ದೇವೆ; ಆತ್ಮಹತ್ಯೆ ಬೇಡ, ಆತ್ಮವಿಶ್ವಾಸವಿರಲಿ ರೈತ ಬಂಧುಗಳೇ'” ಎಂದು ಕರೆ ನೀಡಿದ್ದರು.

2015ರಲ್ಲಿ ಇಂದಿನ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, “ಕೆ ಎಸ್ ಪುಟ್ಟಣ್ಣಯ್ಯ ವಿಧಾನಸಭೆಗೆ ಸಿಂಧೂರವಿದ್ದಂತೆ. ಇಂತಹ ರೈತ ನಾಯಕರನ್ನ ಆಯ್ಕೆ ಮಾಡಿದ ಜನಗಳೇ ಧನ್ಯ. ಪ್ರಜ್ಞಾವಂತರು, ರೈತಪರ ಹೋರಾಟಗಾರರಾಗಿ ಎಂತಹ ಸಂದರ್ಭ ಎದುರಾದರೂ ರೈತ ಸಮಸ್ಯೆ ಕುರಿತಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ. ಇಂತಹ ರೈತ ನಾಯಕ ನಮ್ಮ ಪಕ್ಷವನ್ನು ಬೆಂಬಲಿಸಿದ್ದು ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ವ್ಯಾಖ್ಯಾನಿಸಿದ್ದರು.

ಈ ವಿಶೇಷ ವಿಡಿಯೋ ವೀಕ್ಷಿಸಿ: https://www.youtube.com/watch?v=rBBDK8Y88O0

ಇಂತಹ ಜನನಾಯಕ ದೈಹಿಕವಾಗಿ ಇಲ್ಲದಿದ್ದರೂ ರೈತ ಚಳುವಳಿಯ ಮೂಲಕ ಜೀವಂತವಾಗಿದ್ದಾರೆ. ಹೊಸ ತಲಮಾರಿಗೆ, ಭವಿಷ್ಯದ ಹೋರಾಟಕ್ಕೆ ನಿಜ ಸ್ಫೂರ್ತಿ. ಶಾಸಕರಾಗಿದ್ದರೂ ರಾಜಕಾರಣಿಯಂತಿರದೆ, ರೈತ ಸಂಘದ ಕಾರ್ಯಕರ್ತನಂತೆ ಗುಡುಗಿದ್ದು, ಹೋರಾಟ ನಡೆಸಿದ್ದು ಮಾದರಿ. ಉತ್ತಮ ವಾಗ್ಮಿಯಷ್ಟೇ ಅಲ್ಲದೇ, ಕಲಾವಿದರಾಗಿಯೂ ಸಹ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ರೈತ ಕಣ್ಮಣಿ ಎಂತಲೇ ಹೆಸರಾಗಿದ್ದಾರೆ ಕೆ ಎಸ್ ಪುಟ್ಟಣ್ಣಯ್ಯ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ...

KPSC ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹಿಸಿ ಚಡಚಣದಲ್ಲಿ ಉಪವಾಸ ಸತ್ಯಾಗ್ರಹ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಕರ್ನಾಟಕ ಲೋಕಸೇವಾ...

ಉಡುಪಿ | ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಕೊಲೆ

ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ಮಂಗಳವಾರ ಬೆಳಗ್ಗೆ...