ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 35 ಕುರಿಗಳನ್ನು ಕಳ್ಳರು ಕದ್ದೊಯ್ದಿರುವುದು ಬೆಳಕಿಗೆ ಬಂದಿದ್ದು, ಗ್ರಾಮೀಣ ಭಾಗದ ಕುರಿಗಾಹಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಾಲ್ಲೂಕಿನ ಬಂದಳ್ಳಿ ಗ್ರಾಮದ ನಿವಾಸಿಗಳಾದ ಸಿದ್ದಪ್ಪ ಮಾಳಪ್ಪ ಅವರಿಗೆ ಸೇರಿದ 25 ಕುರಿಗಳು ಹಾಗೂ ಈಶಪ್ಪ ಗುಂಜಲಪ್ಪ ಅವರಿಗೆ ಸೇರಿದ 10 ಕುರಿಗಳು ಕಳುವಾಗಿವೆ. ಈ ಘಟನೆಗಳು ರಾತ್ರಿ ವೇಳೆ ಸಂಭವಿಸಿರುವುದು ಗಮನಾರ್ಹವಾಗಿದೆ.
ಮಾಹಿತಿಯ ಪ್ರಕಾರ, ಈಶಪ್ಪ ಅವರು ತಮ್ಮ ಹೊಲದಲ್ಲಿನ ಶೆಡ್‌ನಲ್ಲಿ ಕುರಿಗಳನ್ನು ಕಟ್ಟಿಹಾಕಿ ಇರಿಸಿದ್ದರು. ಆದರೆ ರಾತ್ರಿ ವೇಳೆ ಅಪರಿಚಿತರು ಶೆಡ್‌ಗೆ ನುಗ್ಗಿ ಸುಮಾರು ₹2.50 ಲಕ್ಷ ಮೌಲ್ಯದ 25 ಕುರಿಗಳನ್ನು ಕದ್ದೊಯ್ದಿದ್ದಾರೆ. ಬೆಳಿಗ್ಗೆ ಹೊಲಕ್ಕೆ ಬಂದಾಗ ಕುರಿಗಳು ಕಾಣೆಯಾಗಿರುವುದು ಗಮನಕ್ಕೆ ಬಂದು, ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ರೀತಿಯಲ್ಲಿ ಸಿದ್ದಪ್ಪ ಮಾಳಪ್ಪ ಅವರಿಗೆ ಸೇರಿದ ಸುಮಾರು ₹1.20 ಲಕ್ಷ ಮೌಲ್ಯದ 10 ಕುರಿಗಳನ್ನೂ ಕಳ್ಳರು ಕಳವು ಮಾಡಿರುವುದು ತಿಳಿದುಬಂದಿದೆ. ಈ ಎರಡೂ ಪ್ರಕರಣಗಳು ಒಂದೇ ಪ್ರದೇಶದಲ್ಲಿ ನಡೆದಿರುವುದರಿಂದ ಸಂಘಟಿತ ಕಳ್ಳರ ಗುಂಪಿನ ಕೈವಾಡ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಕುರಿ ಕಳವು ಪ್ರಕರಣಗಳು ಹೆಚ್ಚುತ್ತಿರುವುದು ಗ್ರಾಮೀಣ ಜನರಲ್ಲಿ ಆತಂಕ ಮೂಡಿಸಿದೆ. ಕುರಿಗಳನ್ನು ಜೀವನೋಪಾಯವಾಗಿಸಿಕೊಂಡಿರುವ ಕುರಿಗಾಹಿಗಳು ತಮ್ಮ ಪಶುಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿ ವೇಳೆ ಕಾವಲು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುನ್ನಾಳ, “ಜಿಲ್ಲೆಯಲ್ಲಿ ಕುರಿ ಕಳ್ಳತನ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಳ್ಳರನ್ನು ಶೀಘ್ರವಾಗಿ ಬಂಧಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು,” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಯಾದಗಿರಿ | ಅಸಹಜ ವರ್ತನೆಗಳಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ : ಆರ್ ಎಂ ಹೊನ್ನಾರೆಡ್ಡಿ
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.




