ಬಂಗಾರಪೇಟೆ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಮರಗಲ್ ಬಳಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ ಐದು ಮಂದಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಮಹೇಂದ್ರ ಟಿಯುವಿ 300 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮರಗಲ್ ಸಮೀಪದ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕಾರು ಹಲವು ಬಾರಿ ಪಲ್ಟಿ ಹೊಡೆದು ಸುಮಾರು 200 ಮೀಟರ್‌ಗಳಷ್ಟು ದೂರಕ್ಕೆ ಉರುಳಿದ ಪರಿಣಾಮ ನಾಲ್ಕು ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನವನೀತ್ ಗಯಾಕ್ವಾಡ್, ಪವಾರ್ ವಿಶ್ವನಾಥ್ ದಿಗಂಬರ, ಕಿರಣ್ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ. ಸೋಮನಾಥ್ ಕೊಲ್ಲಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಎಸ್ ಪಿ ಶಿವಂಶು ರಜಪೂತ್ ಡಿವೈಎಸ್ಪಿ ಲಕ್ಷಯ್ಯ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೀಡಾದ ವಾಹನ ಹಾಗೂ ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಸಾಲ ಮರುಪಾವತಿಸಿ, ಸಹಕಾರಿ ವ್ಯವಸ್ಥೆ ಉಳಿಸಿ: ಕೊತ್ತೂರು ಮಂಜುನಾಥ್
ಪ್ರಾಥಮಿಕ ತನಿಖೆಯ ಪ್ರಕಾರ, ರಸ್ತೆಯ ತಿರುವಿನಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅಪಘಾತದ ನಿಖರ ಕಾರಣವನ್ನು ತನಿಖೆಯ ನಂತರವೇ ಖಚಿತ ಪಡಿಸಬೇಕಾಗಿದೆ. ಘಟನೆಯ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.




