ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಅಸ್ಟ್ರಾಜೆನೆಕಾ ಸಂಸ್ಥೆಯು ಲಸಿಕೆಯು ಕೆಲವು ಜನರಲ್ಲಿ ಅಡ್ಡ ಪರಿಣಾಮವಾಗಿ ಟಿಟಿಎಸ್ ಕಾಯಿಲೆಗೆ (ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಉಂಟಾಗುವ ಸ್ಥಿತಿ) ಕಾರಣವಾಗಬಹುದು ಎಂದು ಇತ್ತೀಚೆಗೆ ಇಂಗ್ಲೆಂಡ್ ಕೋರ್ಟಿನಲ್ಲಿ ಒಪ್ಪಿಕೊಂಡಿತ್ತು.
ಈ ಸುದ್ದಿ ಹೊರಬಂದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಹಲವು ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೆಲವು ಪೋಸ್ಟ್‌ಗಳು ಹೆಚ್ಚಿನ ಭಾರತೀಯರು ಟಿಟಿಎಸ್ ಕಾಯಿಲೆಗೆ ತುತ್ತಾಗಲಿದ್ದಾರೆ ಎಂದು ಹೇಳುತ್ತವೆ. ಈ ಬಗ್ಗೆ ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್ (ಟಿಪ್) ಯು ಹರಿದಾಡುತ್ತಿರುವ ಮಾಹಿತಿ ಅರ್ಧದಷ್ಟು ಮಾತ್ರ ಸತ್ಯವಾಗಿದೆ ಎಂದು ಹೇಳುತ್ತದೆ. ಟಿಟಿಎಸ್ ಅಪಾಯ ನಿಜವಾದರೂ ಸಂಭವನೀಯತೆ ‘ಬಹಳ ಅಪರೂಪ’ ಎಂದು ತಿಳಿಸಿದೆ.
ಟಿಟಿಎಸ್ ಎಂದರೇನು? ಅದರ ಲಕ್ಷಣಗಳೇನು?
ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಅಂದರೆ ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಉಂಟಾಗುವ ಸ್ಥಿತಿ ಉಂಟಾಗುತ್ತದೆ. ಕೋವಿಡ್-19 ಸಮಯದಲ್ಲಿ ನೀಡಲಾದ ಲಸಿಕೆಗಳಿಂದ ಉಂಟಾಗುವ ಆರೋಗ್ಯ ಸ್ಥಿತಿಗೆ ಇದು ಸಂಬಂಧಿಸಿದೆ. ಉಸಿರಾಟದ ತೊಂದರೆ, ಎದೆ ನೋವು, ಕಾಲಿನ ಊತ, ತೀವ್ರ ಮತ್ತು ನಿರಂತರ ತಲೆನೋವು,ತೋಳುಗಳು ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ ಮತ್ತು ಹೊಟ್ಟೆ ನೋವು ಟಿಟಿಎಸ್‌ನ ಲಕ್ಷಣಗಳಾಗಿದೆ. ಬಾಧಿತ ವ್ಯಕ್ತಿಗಳು ಮೂಗೇಟು ನೋವುಗಳ ರೀತಿಯಲ್ಲಿ ಬಳಲುತ್ತಾರೆ.
ಕೋವಿಶೀಲ್ಡ್‌ನಿಂದ ಅಪರೂಪದ ಅಡ್ಡ ಪರಿಣಾಮವಾಗುತ್ತದೆ ಎಂದು ಕಂಪನಿ ಹೇಳುತ್ತದೆ. ಆದರೆ ಅಸ್ಟ್ರಾ ಜೆನೆಕಾ ನೀಡಿದ ಕೋವಿಡ್ ಲಸಿಕೆಗಳನ್ನು ಪಡೆದ ಪ್ರತಿಯೊಬ್ಬರೂ ಟಿಟಿಎಸ್‌ನಿಂದ ಬಳಲುವುದಿಲ್ಲ. ಕಡಿಮೆ ಪ್ಲೇಟ್ಲೆಟ್ ಮಟ್ಟಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆ ತೀರ ಅಪರೂಪಕ್ಕೆ ಸಂಭವಿಸಬಹುದು ಎಂದು ಕಂಪನಿಯೇ ಒಪ್ಪಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ಧೃತರಾಷ್ಟ್ರ ಸಿಂಡ್ರೋಮ್ ಮತ್ತು ಮೋದಿ ವಾಷಿಂಗ್ ಮಷೀನ್
ಕೋವಿಶೀಲ್ಡ್ ಮತ್ತು ಅಸ್ಟ್ರಾಜೆನೆಕಾ ಪರಸ್ಪರ ಹೇಗೆ ಸಂಬಂಧ?
ಆಕ್ಸ್ಫರ್ಡ್ ವಿವಿ ಸಹಯೋಗದೊಂದಿಗಿನ ಬ್ರಿಟಿಷ್-ಸ್ವೀಡಿಷ್ ಫಾರ್ಮಾಸ್ಯುಟಿಕಲ್ ಕಂಪನಿಯಾದ ಅಸ್ಟ್ರಾಜೆನೆಕಾ ಕೋವಿಡ್ 19 ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಅದೇ ಲಸಿಕೆಯನ್ನು ಕೋವಿಶೀಲ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲು ಪರವಾನಗಿ ನೀಡಲಾಗಿದೆ. ಯುರೋಪಿನಲ್ಲಿ ಈ ಲಸಿಕೆಯನ್ನು ವ್ಯಾಕ್ಸ್ಜೆವ್ರಿಯಾ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡೂ ಲಸಿಕೆಗಳು ಪರಿಣಾಮ ಬೀರುವುದರಲ್ಲಿ ಒಂದೇ ಆಗಿರುತ್ತವೆ.
ಅಸ್ಟ್ರಾಜೆನೆಕಾ ಲಸಿಕೆಯಿಂದ ಮಾತ್ರ ಟಿಟಿಎಸ್ ಪರಿಣಾಮ ಉಂಟಾಗುತ್ತದೆಯೆ?
ಟಿಟಿಎಸ್ ಪರಿಣಾಮ ಇತರ ಕೋವಿಡ್ ಲಸಿಕೆಗಳಿಂದಲೂ ಸಂಭವಿಸುತ್ತದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಕೋವಿಡ್ ಲಸಿಕೆಯಿಂದ ಕೂಡ ಟಿಟಿಎಸ್ ಪರಿಣಾಮ ಉಂಟಾಗುತ್ತದೆ. 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇತರ ಕೋವಿಡ್ ಲಸಿಕೆಗಳಿಂದಲೂ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದೆ. ಭಾರತದಲ್ಲಿ ತಯಾರಾದ ಲಸಿಕೆಯಿಂದಲೂ ಅಡ್ಡ ಪರಿಣಾಮ ಉಂಟಾಗಲಿದ್ದು, ಆದರೆ ಇದು ತೀರ ಅಪರೂಪವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ ಇದುವರೆಗೆ ಸೀಮಿತ ಸಂಖ್ಯೆಯ ಟಿಟಿಎಸ್ ಪ್ರಕರಣಗಳು ವರದಿಯಾಗಿವೆ.
ಎಲ್ಲ ಲಸಿಕೆಗಳಲ್ಲಿ ಸೌಮ್ಯ ಅಡ್ಡ ಪರಿಣಾಮಗಳು ತುಂಬಾ ಸಾಮಾನ್ಯವಾಗಿರುತ್ತದೆ. ಆದರೆ ಜ್ವರ ಮತ್ತು ನೋವಿನಂತಹ ಈ ಅಡ್ಡಪರಿಣಾಮಗಳು ತಾತ್ಕಾಲಿಕವಾಗಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಲಸಿಕೆಗಳು ತುಂಬಾ ಸುರಕ್ಷಿತವಾಗಿದೆ.
ಯಾವುದೇ ಔಷಧಿಯಂತೆ, ಲಸಿಕೆಗಳು ಕೂಡ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದಾಗ್ಯೂ, ಇವುಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಕೋವಿಶೀಲ್ಡ್ ಪಡೆದ ಪ್ರತೀ 10 ಲಕ್ಷ ಜನರಲ್ಲಿ ಏಳು ಅಥವಾ ಎಂಟು ಮಂದಿಗೆ ಮಾತ್ರ ಟಿಟಿಎಸ್ ಸಮಸ್ಯೆ ತಲೆದೋರಬಹುದು ಮೊದಲ ಡೋಸ್ ಪಡೆದಾಗ ಮಾತ್ರ ಅದರ ಅಡ್ಡಪರಿಣಾಮ ಸಾಧ್ಯತೆ ಗರಿಷ್ಠ ಇರುತ್ತದೆ. ಎರಡನೇ ಡೋಸ್‌ನಲ್ಲಿ ಅಪಾಯ ಕಡಿಮೆ ಆಗುತ್ತದೆ. ಮೂರನೇ ಡೋಸ್‌ನಲ್ಲಿ ಇನ್ನೂ ಕಡಿಮೆ ಅಪಾಯ ಇರುತ್ತದೆ. ಯಾವುದೇ ಅಡ್ಡ ಪರಿಣಾಮ ಬರುವುದಿದ್ದರೆ ಎರಡು ಅಥವಾ ಮೂರು ತಿಂಗಳಲ್ಲಿ ಅದು ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ ಏನು?
ಆರಂಭದಲ್ಲಿ ರೋಗವನ್ನು ನಿರ್ಣಯಿಸಿದರೆ, ಟಿಟಿಎಸ್ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ಮೊದಲ ಹಂತವೆಂದರೆ ಮೊದಲನೇ ಕೋವಿಶೀಲ್ಡ್ ಲಸಿಕೆ ಪಡೆದಿದ್ದರೆ ಎರಡನೇ ಲಸಿಕೆಯನ್ನು ನಿಲ್ಲಿಸುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪ್ರಾರಂಭಿಸುವುದು. ಚಿಕಿತ್ಸೆಯು ಮತ್ತಷ್ಟು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಿ ರಕ್ತ ತೆಳುಗೊಳಿಸುವಿಕೆಯ ಬಳಕೆಯನ್ನು ಒಳಗೊಂಡಿರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಲ್ಲಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.