ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ಇಂದು ಅಸ್ಸಾಂ ಪೊಲೀಸ್ ತಂಡವು ಭೇಟಿ ನೀಡಿ ವಿಚಾರಣೆ ನಡೆಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಕುಟುಂಬದ ವಿರುದ್ಧ ಖೇರಾ ಮಾಡಿದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಖೇರಾ ನಿವಾಸಕ್ಕೆ ಭೇಟಿ ನೀಡಿದ ಅಸ್ಸಾಂ ಪೊಲೀಸ್ ತಂಡವು, ಸ್ಥಳೀಯ ದೆಹಲಿ ಪೊಲೀಸರಿಗೂ ಅಧಿಕೃತವಾಗಿ ಮಾಹಿತಿ ನೀಡಿ ಅವರ ಸಹಕಾರ ಪಡೆದುಕೊಂಡಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಕಳೆದ ಭಾನುವಾರ ಪವನ್ ಖೇರಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಣಿಕಿ ಭುಯಾನ್ ಶರ್ಮಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಶರ್ಮಾ ಪತ್ನಿಯು ಎರಡು ಇಸ್ಲಾಮಿಕ್ ರಾಷ್ಟ್ರಗಳು ಸೇರಿದಂತೆ ಒಟ್ಟು ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ, ದುಬೈನಲ್ಲಿ ವಿಲಾಸಿ ಆಸ್ತಿ ಹೊಂದಿದ್ದಾರೆ ಮತ್ತು ಅಮೆರಿಕದ ವ್ಯೋಮಿಂಗ್‌ನಲ್ಲಿ ಮಿಲಿಯನ್‌ಗಟ್ಟಲೆ (ಲಕ್ಷಾಂತರ) ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ಖೇರಾ ಆರೋಪಿಸಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಶರ್ಮಾ ಅವರ ಪತ್ನಿ ಅಸ್ಸಾಂ ಪೊಲೀಸ್ ಕ್ರೈಮ್ ಬ್ರಾಂಚ್‌ನಲ್ಲಿ ಪವನ್ ಖೇರಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಏಪ್ರಿಲ್ 9 ರಂದು ನಡೆಯುವ ಅಸೆಂಬ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ತಮ್ಮ ಮತ್ತು ತಮ್ಮ ಪತ್ನಿಯ ವಿರುದ್ಧ ‘ವಿದೇಶಿ ಪ್ರಭಾವಿತ ಸುಳ್ಳು ಮಾಹಿತಿ ಅಭಿಯಾನ’ ನಡೆಸುತ್ತಿದೆ ಎಂದು ಸೋಮವಾರ (ಏಪ್ರಿಲ್ 6) ಆರೋಪಿಸಿದ್ದರು. ಖೇರಾ ಮಾಡಿದ ಈ ಆರೋಪಗಳಿಗೆ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಗ್ರೂಪ್ ಒಂದರಿಂದ ಪಡೆದ ಸುಳ್ಳು ಮಾಹಿತಿಯೇ ಕಾರಣ ಎಂದು ಅವರು ಹೇಳಿದ್ದಾರೆ. ಜೊತೆಗೆ, ಅಸ್ಸಾಂ ಪೊಲೀಸ್ ಭೇಟಿಯ ನಂತರ ಖೇರಾ ಅವರು ದೆಹಲಿಯಿಂದ ಹೈದರಾಬಾದ್‌ಗೆ ಪರಾರಿಯಾಗಿದ್ದಾರೆ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ. “ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಲಿದೆ” ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್
ಅಸ್ಸಾಂ ಪೊಲೀಸ್ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಇದೊಂದು ವಿರೋಧ ಪಕ್ಷದ ಧ್ವನಿಯನ್ನು ಅಡಗಿಸುವ ‘ದ್ವೇಷದ ರಾಜಕಾರಣ’ ಮತ್ತು ಸರ್ಕಾರಿ ಸಂಸ್ಥೆಗಳ ದುರ್ಬಳಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಸಾರ್ವಜನಿಕ ಹಿತದೃಷ್ಟಿಯಿಂದ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದ ನಮ್ಮ ಸಹೋದ್ಯೋಗಿಯನ್ನು ಬಂಧಿಸಲು ಇಡೀ ಪೊಲೀಸ್ ಪಡೆಯನ್ನು ಬಳಸಿರುವುದು ಅಸ್ಸಾಂ ಸಿಎಂ ಅವರ ಹತಾಶೆ ಮತ್ತು ಆತಂಕವನ್ನು ತೋರಿಸುತ್ತದೆ. ಇದು ಅವರು ಮುಂಬರುವ ಚುನಾವಣೆಯಲ್ಲಿ ಎದುರಿಸಲಿರುವ ಸೋಲಿನ ಸುಳಿವಾಗಿದೆ. ಇದು ಕಾನೂನಿನ ಕ್ರಮವಲ್ಲ, ಬದಲಾಗಿ ಕಪ್ಪು ಕೆಲಸಗಳನ್ನು ಬಯಲಿಗೆಳೆಯುತ್ತಿರುವ ವಿರೋಧ ಪಕ್ಷದ ಧ್ವನಿಯನ್ನು ಅಡಗಿಸುವ ದಬ್ಬಾಳಿಕೆಯ ರಾಜಕಾರಣ. ಬೆದರಿಸುವ ಪ್ರಯತ್ನ ಮಾಡುವವರೇ ಹೆಚ್ಚು ಹೆದರಿರುತ್ತಾರೆ ಮತ್ತು ಅವರು ಮುಚ್ಚಿಡುವ ಸಂಗತಿಗಳು ಬಹಳಷ್ಟಿರುತ್ತವೆ” ಎಂದು ವಾಗ್ದಾಳಿ ನಡೆಸಿದ್ದಾರೆ.




