“ಡಿಜಿಟಲ್ ವಂಚನೆ ಮತ್ತು “ಡಿಜಿಟಲ್ ಅರೆಸ್ಟ್” ನಂತಹ ಸೈಬರ್ ಅಪರಾಧಗಳಿಗೆ ಒಳಗಾಗುವ ಜನರ ಹಣವನ್ನು ಕಾಪಾಡುವುದು ಬ್ಯಾಂಕ್ಗಳ ಮತ್ತು ಹಣಕಾಸು ಸಂಸ್ಥೆಗಳ ಮುಖ್ಯ ಜವಾಬ್ದಾರಿಯಾಗಿದೆ. ಒಂದು ವೇಳೆ ಬ್ಯಾಂಕ್ಗಳ ನಿರ್ಲಕ್ಷ್ಯದಿಂದ ಅಥವಾ ಮುನ್ನೆಚ್ಚರಿಕೆ ಕೊರತೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ, ಆ ನಷ್ಟವನ್ನು ಬ್ಯಾಂಕ್ಗಳೇ ಭರಿಸಬೇಕು ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಸುಪ್ರೀಂ ಕೋರ್ಟ್ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದೆ.
ಈ ಕುರಿತು ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠ, ಬ್ಯಾಂಕ್ಗಳು ತಮ್ಮ ಗ್ರಾಹಕರ ಖಾತೆಗಳನ್ನು ಸುರಕ್ಷಿತವಾಗಿಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.
ಬ್ಯಾಂಕ್ಗಳಿಗೆ ಸುಪ್ರೀಂ ಕೋರ್ಟ್ ಪ್ರಮುಖ ಸೂಚನೆಗಳನ್ನು ನೀಡಿದೆ.
ಒಬ್ಬ ವ್ಯಕ್ತಿ ಸಾಮಾನ್ಯವಾಗಿ ದಿನಕ್ಕೆ ₹10,000 ಅಥವಾ ₹20,000 ಪಡೆಯುತ್ತಿದ್ದು, ದಿಢೀರನೆ ದೊಡ್ಡ ಮಟ್ಟದ ಹಣವನ್ನು ವರ್ಗಾವಣೆ ಮಾಡಲು ಹೋದರೆ ಅಂತಹ ವ್ಯವಹಾರವನ್ನು ಬ್ಯಾಂಕ್ಗಳು ತಕ್ಷಣ ತಡೆಯಬೇಕು.
ಡಿಜಿಟಲ್ ಅರೆಸ್ಟ್ ನಂತಹ ಮೋಸಕ್ಕೆ ಒಳಗಾಗಿ ಹಣ ವರ್ಗಾಯಿಸುವ ಸಂಶಯ ಬಂದ ತಕ್ಷಣ ಬ್ಯಾಂಕ್ನವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ವಂಚನೆಗೆ ಬ್ಯಾಂಕ್ಗಳ ಜಾಗರೂಕತೆಯ ಕೊರತೆಯೇ ಕಾರಣವಾಗಿದ್ದರೆ, ಬ್ಯಾಂಕ್ಗಳೇ ಆ ನಷ್ಟವನ್ನು ಕೊಟ್ಟು, ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ.
ಸೈಬರ್ ಕಳ್ಳರು ಬಳಸುವ ನಕಲಿ ಅಥವಾ ಮುಳು ಖಾತೆಗಳ ಮೇಲೆ ತಕ್ಷಣ ಕಣ್ಣಿಡಬೇಕು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಡಿಜಿಟಲ್ ಅರೆಸ್ಟ್ ಕುರಿತು ಕಳವಳ ವ್ಯಕ್ತಪಡಿಸಿ, “ಫೋನ್ ಮಾಡಿ ಅರೆಸ್ಟ್ ಮಾಡಿದ್ದೇವೆ ಎಂದ ತಕ್ಷಣ ಹೆದರಿ ಹಣ ಕೊಡುವುದು ಸರಿಯಲ್ಲ. ವಿದ್ಯಾವಂತರೇ ಇಂತಹ ಭಯಕ್ಕೆ ಬಿದ್ದು ಮೋಸ ಹೋಗುತ್ತಿರುವುದು ದುರಂತ,” ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, “ಸರ್ಕಾರದ ಜಾಗೃತಿ ಹಾಗೂ ಕೋರ್ಟ್ನ ಹಸ್ತಕ್ಷೇಪದಿಂದಾಗಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಶೇ.50 ರಷ್ಟು ಕಡಿಮೆಯಾಗಿವೆ” ಎಂದು ತಿಳಿಸಿದರು. ಆದರೆ, ಸೈಬರ್ ಅಪರಾಧಗಳಿಂದಾಗಿ ಈ ವರ್ಷವೇ ದೇಶದಲ್ಲಿ ಸುಮಾರು ₹800 ಕೋಟಿ ನಷ್ಟವಾಗಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿ ಪ್ರಕಾರ, 2020ರಲ್ಲಿ 10,395 ಇದ್ದ ಸೈಬರ್ ವಂಚನೆ ಪ್ರಕರಣಗಳು 2024 ರ ವೇಳೆಗೆ 29,758 ಕ್ಕೆ ಏರಿಕೆಯಾಗಿವೆ. 2023ರಲ್ಲಿ ಜನರು ₹7,465 ಕೋಟಿ ಕಳೆದುಕೊಂಡಿದ್ದರೆ, 2024ರಲ್ಲಿ ಈ ಮೊತ್ತ ಬರೋಬ್ಬರಿ ₹22,845 ಕೋಟಿಗೆ ತಲುಪಿದೆ.
2024ರಲ್ಲಿ ತೆಲಂಗಾಣದಲ್ಲಿ ಅತಿ ಹೆಚ್ಚು (18,922) ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಬಿಹಾರ (4,020) ಮತ್ತು ಮಹಾರಾಷ್ಟ್ರ (2,827) ರಾಜ್ಯಗಳಿವೆ. ಶೇರ್ ಮಾರ್ಕೆಟ್ ಹೂಡಿಕೆ ನೆಪದಲ್ಲಿ ಮೋಸ, ಫೋನ್/ವಿಡಿಯೋ ಕಾಲ್ ಮಾಡಿ ಹೆದರಿಸುವ ‘ಡಿಜಿಟಲ್ ಅರೆಸ್ಟ್’, ಪಾರ್ಟ್-ಟೈಮ್ ಕೆಲಸದ ಹೆಸರಿನಲ್ಲಿ ಮೋಸ ಹಾಗೂ ಯುಪಿಐ (UPI) ಲಿಂಕ್ಗಳ ಮೂಲಕ ಹಣ ದೋಚುವುದು ಹೆಚ್ಚು ವರದಿಯಾಗುತ್ತಿವೆ.
ಭಾರತದಲ್ಲಿ ನಡೆಯುವ ಹೆಚ್ಚಿನ ದೊಡ್ಡ ಮಟ್ಟದ ಸೈಬರ್ ವಂಚನೆಗಳ ಜಾಲಗಳು ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ ಮತ್ತು ವಿಯೆಟ್ನಾಂ ನಂತಹ ಆಗ್ನೇಯ ಏಷ್ಯಾದ ದೇಶಗಳಿಂದ ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಸೈಬರ್ ಮೋಸಕ್ಕೊಳಗಾದರೆ ತಕ್ಷಣ ಏನು ಮಾಡಬೇಕು?
ಒಂದು ವೇಳೆ ನೀವು ಅಥವಾ ನಿಮ್ಮ ಪರಿಚಿತರು ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ.
ರಾಷ್ಟ್ರೀಯ ಹೆಲ್ಪ್ಲೈನ್ ಸಂಖ್ಯೆ 1930 ಗೆ ತಕ್ಷಣ ಕರೆ ಮಾಡಿ ದೂರು ನೀಡಿ. ಅಥವಾ cybercrime.gov.in ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ದೂರು ದಾಖಲಿಸಿ.
ಸರ್ಕಾರದ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್’ ವ್ಯವಸ್ಥೆಯ ಮೂಲಕ ಇದುವರೆಗೆ ಸಾರ್ವಜನಿಕರ ₹11,158 ಕೋಟಿಗೂ ಹೆಚ್ಚು ಹಣವನ್ನು ವಂಚಕರ ಕೈಸೇರದಂತೆ ತಡೆದು, ಫ್ರೀಜ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಲಕ್ಷಾಂತರ ನಕಲಿ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಲಾಗಿದೆ.




