ಹಗಲು ವಿಶ್ರಾಂತಿ, ರಾತ್ರಿ ಕೆಲಸವೆಂಬ ಜೀವನಶೈಲಿಗೆ ತಮ್ಮನ್ನು ತಾವು ಅನಿವಾರ್ಯವಾಗಿ ದೂಡಿಕೊಳ್ಳುತ್ತಿರುವ ಉತ್ತರ ಪ್ರದೇಶದ ಬಾಂದಾ ಜಿಲ್ಲೆ, ಮುಂದಿನ ಎರಡು ದಶಕಗಳಲ್ಲಿ ವಾಸಯೋಗ್ಯವಲ್ಲದ ಬಂಜರು ಭೂಮಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂದಹಾಗೆ, ಈ ಬಾಂದಾ ಜಿಲ್ಲೆ ಇರುವುದು ಭಾರತದ ಕತ್ತಲಖಂಡ ಎಂದು ಒಂದೊಮ್ಮೆ ಹೆಸರಾಗಿದ್ದ ಬುಂದೇಲಖಂಡದಲ್ಲಿ. ಉತ್ತರಪ್ರದೇಶದ 13 ಮತ್ತು ಮಧ್ಯಪ್ರದೇಶದ ಆರು ಹಿಂದುಳಿದ ಜಿಲ್ಲೆಗಳು ಸೇರಿ ಬುಂದೇಲಖಂಡ.
ದೇಶದಲ್ಲಿ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ವಾಹನ ಚಾಲಕರು, ಡೆಲಿವರಿ ಕಾರ್ಯ ಮಾಡುವವರು ಅನಿವಾರ್ಯವಾಗಿ ಬಿಸಿಲಿನ ತಾಪದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇವೆಲ್ಲವುದರ ನಡುವೆ ದೇಶದ ಅತ್ಯಂತ ಉಷ್ಣೋಗ್ರ ಜಿಲ್ಲೆಯಾದ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಜನ ರಾತ್ರಿಯಲ್ಲಿ ಕೃಷಿ ಕೆಲಸಕ್ಕಿಳಿದು, ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ವಿಶ್ರಾಂತಿಗೆ ಮರಳುತ್ತಿದ್ದಾರೆ.
ಈ ವರ್ಷ ಬಾಂದಾ ಜಿಲ್ಲೆಯು ದೇಶದ ಅತ್ಯಂತ ಬಿಸಿಯಾದ ಮತ್ತು ಅತ್ಯಧಿಕ ತಾಪಮಾನವಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ ತಾಪಮಾನವು 48.2 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ. ವಿಶ್ವದ ಅತಿ ಬಿಸಿಯಾದ ನಗರಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಭೀಕರ ಬಿಸಿಲಿನ ನಡುವೆ ಕೆಲಸ ಕಾರ್ಯ ಮಾಡಲು ಸಾಧ್ಯವಾಗದ ಕಾರಣ ಜನರು ಹಗಲಲ್ಲಿ ವಿಶ್ರಾಂತಿ ಪಡೆದು, ರಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಜಾಗತಿಕ ತಾಪಮಾನ ಏರಿಕೆ: ಬಿಸಿಗಾಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
ವ್ಯಾಪಾರಸ್ಥರು ಮುಂಜಾನೆಯೇ ಕೆಲಸ ಮುಗಿಸುತ್ತಿದ್ದು, ಮಧ್ಯಾಹ್ನ ರಸ್ತೆಗಳು ನಿರ್ಜನವಾಗುತ್ತಿವೆ. ಬಿಸಿಲಿನ ತೀವ್ರತೆ ತಡೆಯಲಾರದೆ ಕಾರ್ಮಿಕರು ಶೇ. 40ರಷ್ಟು ಕೂಲಿ ಕಳೆದುಕೊಂಡರೂ ಮಧ್ಯಾಹ್ನದ ಕೆಲಸ ನಿಲ್ಲಿಸುತ್ತಿದ್ದಾರೆ. ರೈತರು ತಡರಾತ್ರಿ LED ಫ್ಲಡ್‌ಲೈಟ್‌ಗಳ ಬೆಳಕಿನಲ್ಲಿ ಕೃಷಿ ಮಾಡುತ್ತಿದ್ದಾರೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಗಣಿಗಾರಿಕೆ ಮತ್ತು ಒತ್ತುವರಿಯಿಂದಾಗಿ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶವು ತೀವ್ರವಾಗಿ ಕುಸಿದಿದೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಯೋಜನೆಗಾಗಿಯೇ ಸುಮಾರು 1.89 ಲಕ್ಷ ಮರಗಳನ್ನು ಕಡಿಯಲಾಗಿದೆ. ಇನ್ನೊಂದೆಡೆ ವಿಂಧ್ಯ ಪರ್ವತ ಶ್ರೇಣಿಯಲ್ಲಿ ನಡೆಯುತ್ತಿರುವ ಅತಿಯಾದ ಬ್ಲಾಸ್ಟಿಂಗ್‌ನಿಂದಾಗಿ ಶೇ. 25 ರಷ್ಟು ಬೆಟ್ಟಗಳು ನಾಶವಾಗಿವೆ. ಇದರಿಂದ ಅಂತರ್ಜಲ ಮರುಪೂರಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಕೇನ್ ಮತ್ತು ಯಮುನಾ ನದಿಗಳಿಂದ ಜೆಸಿಬಿಗಳ ಮೂಲಕ ಪ್ರತಿದಿನ ಭಾರಿ ಪ್ರಮಾಣದಲ್ಲಿ ಕೆಂಪು ಮರಳು ಲೂಟಿ ಮಾಡಲಾಗುತ್ತಿದೆ. ಇದು ನದಿಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕುಂದಿಸಿದ್ದು, ನೀರಿನ ಮೂಲಗಳು ಬತ್ತುತ್ತಿವೆ. ಇಷ್ಟೊಂದು ಪರಿಸರ ನಾಶದಿಂದಾಗಿ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಬಾಂದಾ ಜಿಲ್ಲೆಯಲ್ಲಿ ಬಿಸಿ ಗಾಳಿ ತೀವ್ರ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಹಸಿರು ಮತ್ತು ತೇವಾಂಶದ ಕೊರತೆಯಿಂದಾಗಿ ಬಾಂದಾ ಜಿಲ್ಲೆ ಈಗ ಕೇವಲ ಒಂದು ‘ಹೀಟ್ ಐಲ್ಯಾಂಡ್’ (ಉಷ್ಣ ದ್ವೀಪ) ಆಗಿ ಮಾರ್ಪಟ್ಟಿದೆ.
ಇಲ್ಲಿ 16 ಗಂಟೆ ವಿದ್ಯುತ್ ನೀಡುತ್ತಿದ್ದರೂ, ಟ್ರಾನ್ಸ್‌ಫಾರ್ಮರ್‌ಗಳು ಕರಗದಂತೆ ತಡೆಯಲು ಸಿಬ್ಬಂದಿ ಅವುಗಳ ಮೇಲೆ ನಿರಂತರವಾಗಿ ನೀರು ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಎರಡು ದಶಕಗಳಲ್ಲಿ ಬಾಂದಾ ಜಿಲ್ಲೆ ವಾಸಯೋಗ್ಯವಲ್ಲದ ಬಂಜರು ಭೂಮಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇವೆಲ್ಲವುದರ ನಡುವೆ ಅಲ್ಲಿನ ಜನರು ಬೆಳಗಿನ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತಿಗೆ ಕೈಹಾಕಿದ್ದಾರೆ. ಹಗಲು ವಿಶ್ರಾಂತಿ, ರಾತ್ರಿ ಕೆಲಸವೆಂಬ ಜೀವನಶೈಲಿಗೆ ತಮ್ಮನ್ನು ತಾವು ಅನಿವಾರ್ಯವಾಗಿ ದೂಡಿಕೊಳ್ಳುತ್ತಿದ್ದಾರೆ.




