“ಈ ಗರ್ಭಿಣಿಯರು ಪಿಬಿಎಂ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಬಂದರೋ ಅಥವಾ ಅವರು ಹಾಡುತ್ತಾ, ಕುಣಿಯುತ್ತಾ ಬಂದರೋ?” ಎಂಬ ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ಸಾರ್ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದೆ.
ಕಳೆದ ತಿಂಗಳು ಐವರು ಗರ್ಭಿಣಿಯರು ಹೆರಿಗೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೀಗ ಆರು ಗರ್ಭಿಣಿಯರ ಮೂತ್ರಪಿಂಡ ವೈಫಲ್ಯವಾಗಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಈ ಸಾವಿಗೆ ಗರ್ಭಿಣಿಯರನ್ನೇ ಹೊಣೆಯಾಗಿಸುವ ಪ್ರಯತ್ನವನ್ನು ಸಚಿವ ಗಜೇಂದ್ರ ಸಿಂಗ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಹೆರಿಗೆಗಾಗಿ 6 ಕಿ.ಮೀ ನಡೆದು ಬಂದ ಗರ್ಭಿಣಿ ಸಾವು
ಬಿಕಾನೆರ್‌ನ ಪಿಬಿಎಂ ಆಸ್ಪತ್ರೆಯಲ್ಲಿ ಆರು ಬಾಣಂತಿಯರ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವಾಗ ಗಜೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಸಚಿವರು ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿವೆ.
ಬಿಕಾನೆರ್‌ನ ಅತಿದೊಡ್ಡ ಸರ್ಕಾರಿ ವೈದ್ಯಕೀಯ ಸೌಲಭ್ಯವಾದ ಆಸ್ಪತ್ರೆಗೆ ಸಚಿವರು ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಐಸಿಯು ಪರಿಶೀಲಿದ ಸಚಿವರ ಬಳಿ ವರದಿಗಾರರು ಸಿಸೇರಿಯನ್ (ಸಿ-ಸೆಕ್ಷನ್) ಹೆರಿಗೆಗಳ ನಂತರ ಸ್ಥಿತಿ ಗಂಭೀರವಾಗಿದ್ದ ಮಹಿಳೆಯರ ಬಗ್ಗೆ ಪ್ರಶ್ನಿಸಿದ್ದರು.
ಇನ್ನು ಸಿಂಗ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಸುರೇಂದ್ರ ವರ್ಮಾ ಕಡೆಗೆ ಸನ್ನೆ ಮಾಡಿ, “ನೀವು ಅವರಿಗೆ ಹೇಳಿ – ಈ ಗರ್ಭಿಣಿಯರು ಪಿಬಿಎಂಗೆ ಗಂಭೀರ ಸ್ಥಿತಿಯಲ್ಲಿ ಬಂದರೋ ಅಥವಾ ಹಾಡುತ್ತಾ, ಕುಣಿಯುತ್ತಾ ಬಂದರೋ” ಎಂದು ಪ್ರಶ್ನಿಸಿದ್ದಾರೆ. ಆಸ್ಪತ್ರೆ ತಲುಪುವಾಗಲೇ ಮಹಿಳೆಯರ ಸ್ಥಿತಿ ಗಂಭೀರವಾಗಿತ್ತು. ಈ ಸ್ಥಿತಿಗೆ ನಾವು ಹೊಣೆಯಲ್ಲ ಎಂಬ ಸಚಿವರ ಪರೋಕ್ಷ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಇನ್ನು ಗಜೇಂದ್ರ ಸಿಂಗ್ ಹೇಳಿಕೆ ನೀಡುತ್ತಿದ್ದಂತೆಯೇ ಮಾಧ್ಯಮಗಳು “ಗರ್ಭಿಣಿಯರ ಬಗ್ಗೆ ನೀವು ಈ ರೀತಿ ಹೇಳಿಕೆ ನೀಡುವುದು ಸರಿಯೇ? ಗರ್ಭಿಣಿ ಮಹಿಳೆಯರು ಹಾಡುತ್ತಾ, ಕುಣಿಯುತ್ತಾ ಬರಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಸರಣಿ ಸಾವಿನ ಘಟನೆಗಳ ನಡುವೆಯೇ ಈ ವಿವಾದ ಸೃಷ್ಟಿಯಾಗಿದೆ. ಕಳೆದ ತಿಂಗಳು, ಕೋಟಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಹೆರಿಗೆ ನಂತರ ಐದು ಮಹಿಳೆಯರು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದರು.
ಇದನ್ನು ಓದಿದ್ದೀರಾ? ಮೈಸೂರು | ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು: ವ್ಯವಸ್ಥೆಯ ವೈಫಲ್ಯವೇ?
ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ. ಆಪರೇಷನ್ ಥಿಯೇಟರ್‌ಗಳಲ್ಲಿ ನೈರ್ಮಲ್ಯ ಇರಲಿಲ್ಲ. ನಕಲಿ ಅಥವಾ ಕಳಪೆ ಆಕ್ಸಿಟೋಸಿನ್ ಇಂಜೆಕ್ಷನ್‌ಗಳನ್ನು ನೀಡಲಾಗಿದೆ ಎಂಬ ವಿಚಾರಗಳು ತನಿಖೆಯಿಂದ ಬಹಿರಂಗಗೊಂಡಿದ್ದವು.
ಈಗ ಪಿಬಿಎಂ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಹೆರಿಗೆಗಳ ನಂತರ ಆರು ಮಹಿಳೆಯರಿಗೆ ಮೂತ್ರಪಿಂಡ ವೈಫಲ್ಯವಾಗಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸರ್ಕಾರವು ಆತುರದಿಂದ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಇನ್ನು ಸಚಿವರ ಭೇಟಿ ವೇಳೆ ಆಸ್ಪತ್ರೆಯ ಹೊರಗೆ ತೀವ್ರ ಪ್ರತಿಭಟನೆ ನಡೆದಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದು ಘರ್ಷಣೆ ಉಂಟಾಗಿದೆ.
ಈ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ನಾಚಿಕೆಗೇಡಿನ ಮತ್ತು ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ. “ಸರ್ಕಾರವು ಬಲ ಪ್ರಯೋಗಿಸಿ ವಿರೋಧ ಪಕ್ಷದ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಆರ್‌ಎಲ್‌ಪಿ ಮುಖ್ಯಸ್ಥ ಹನುಮಾನ್ ಬೇನಿವಾಲ್, ಸಿಎಂ ಭಜನ್‌ಲಾಲ್ ಶರ್ಮಾ ಮತ್ತು ಪಿಎಂಒ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ಯಾಗ್ ಮಾಡಿ, “ತಾಯಂದಿರು ಮತ್ತು ಸಹೋದರಿಯರ ಆರೋಗ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿಯಿಂದ ಇಂತಹ ಅಸಂವೇದನಾಶೀಲ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.





