ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನಿಭಾಯಿಸಲು ಸಾಧ್ಯವಾಗದ ಶ್ರೀಮಂತ-ಬಡವರ ವಿಭಜನೆಯತ್ತ ಜನರು ಶೀಘ್ರದಲ್ಲೇ ಗಮನಹರಿಸಲಿದ್ದಾರೆ. ಬಿಜೆಪಿಗೆ ಹಿಂದೂ-ಮುಸ್ಲಿಂ ರಾಜಕೀಯ ಆಟವನ್ನು ಆಡಲು ಸಾಧ್ಯವಾಗುವುದಿಲ್ಲ. ಆರ್ಥಿಕ ಬಿಕ್ಕಟ್ಟು ಬಿಜೆಪಿಯ ಹಿಂದೂ-ಮುಸ್ಲಿಂ ರಾಜಕೀಯವನ್ನು ಹಿಂದಿಕ್ಕಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್‌ನ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಸಲಹಾ ಮಂಡಳಿಯ ಮೊದಲ ಸಭೆಯಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ. ಕೆ.ಸಿ. ವೇಣುಗೋಪಾಲ್, ತಾರಿಕ್ ಅನ್ವರ್, ಅಭಿಷೇಕ್ ಸಿಂಘ್ವಿ, ಇಮ್ರಾನ್ ಪ್ರತಾಪ್‌ಗಢಿ, ಸೈಯದ್ ನಾಸೀರ್ ಹುಸೇನ್, ಹಿಬಿ ಈಡನ್, ಜೆಬಿ ಮಾಥರ್ ಮತ್ತು ಗುರುದೀಪ್ ಸಪ್ಪಲ್ ಸೇರಿದಂತೆ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಅಪ್ಪಳಿಸಲಿದೆ ಆರ್ಥಿಕ ದುರ್ದಿನಗಳ ಸುಂಟರಗಾಳಿ: ಈ ಹಿಂದಿನಂತೆ ಈ ಸಲವೂ ನಿಜವಾಗುತ್ತಾ ರಾಹುಲ್ ಭವಿಷ್ಯ?
ಬಿಜೆಪಿಯ “ಹಿಂದೂ-ಮುಸ್ಲಿಂ ಧ್ರುವೀಕರಣ” ಮತ್ತು ಅದನ್ನು ತಡೆಗಟ್ಟಲು ಕಾಂಗ್ರೆಸ್ ಕಾರ್ಯತಂತ್ರದ ಬಗ್ಗೆ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ ಗಾಂಧಿ, “ಜನರು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಹಿಂದೂ-ಮುಸ್ಲಿಂ ಧ್ರುವೀಕರಣದ ರಾಜಕೀಯವನ್ನು ಶೀಘ್ರದಲ್ಲೇ ಹಿಂದಿಕ್ಕುತ್ತದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
“ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಇತರ ಅಂತಾರಾಷ್ಟ್ರೀಯ ಬೆಳವಣಿಗೆ ನಡುವೆ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಮಂತ-ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಜನರು ಶೀಘ್ರದಲ್ಲೇ ಆಹಾರ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಮೋದಿ ಸರ್ಕಾರಕ್ಕೆ ಇದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳಿದ್ದಾರೆ.
ಇನ್ನು ಮೋದಿ ಸರ್ಕಾರ ಒಂದು ವರ್ಷದೊಳಗೆ ಬೀಳಲಿದೆ. ಬಿಜೆಪಿಗರು ವಿದೇಶಿ ಶಕ್ತಿಗಳ ಆಜ್ಞೆಯಂತೆ ನಡೆಯುತ್ತಿದ್ದಾರೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಮೂಲಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.




